ಹುಬ್ಬಳ್ಳಿ(ಏ.08): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲರ ಮನೆ ಬಳಿ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ನೂಕು ನುಗ್ಗಾಟ ಉಂಟಾಯಿತು. ಇದರಿಂದಾಗಿ ಮನೆ ಎದುರು ಆಹಾರ ಕಿಟ್‌ ವಿತರಿಸುವುದನ್ನು ನಿಲ್ಲಿಸಿ ಆಯಾ ಗಲ್ಲಿಗಳಲ್ಲೇ ವಿತರಿಸಲಾಗುವುದು ಎಂದು ಹೇಳಿ ನೆರೆದವರನ್ನು ಮರಳಿ ಕಳಿಸಲಾಯಿತು.

ಕೊರೋನಾ ಹಿನ್ನೆಲೆಯಲ್ಲಿ ಅನಿಲಕುಮಾರ ಪಾಟೀಲ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸುತ್ತಾರೆಂಬ ವಿಷಯ ತಿಳಿದ ಜನರು ಅವರ ಮನೆ ಎದುರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೊರೋನಾ ಭೀತಿ ಇದ್ದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆಹಾರಕ್ಕಾಗಿ ಮಕ್ಕಳ ಸಮೇತ ರಸ್ತೆಯಲ್ಲೇ ಕಾಯುತ್ತಿದ್ದರು.

ಬಾರ್ ಓಪನ್‌ಗೆ ಅನುಮತಿ ಕೊಡುವಂತೆ ಕೋರ್ಟ್ ಮೆಟ್ಟಿಲೇರಿದ ವೈದ್ಯ, ಸಿಕ್ಕಿದ್ದೇನು..?

ಮನೆಯೊಳಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಬಂದರೆ ಗೇಟ್‌ ಹೊರಗೆ ಮಾತ್ರ ಗುಂಪು ಗುಂಪಾಗಿ ನಿಲ್ಲುವ ದೃಶ್ಯ ಕಂಡು ಬರುತ್ತಿತ್ತು. ಈ ಬಗ್ಗೆ ಎಷ್ಟೇ ಹೇಳಿದರೂ ಕೇಳದ ಕಾರಣ ಆಹಾರದ ಕಿಟ್‌ ವಿತರಿಸುವುದನ್ನೇ ಪಾಟೀಲ ಸ್ಥಗಿತಗೊಳಿಸಿದ್ದು, ಇನ್ಮುಂದೆ ಯಾರು ಮನೆಯತ್ತ ಬರಬೇಡಿ. ಮನೆಯಲ್ಲಿ ಆಹಾರ ಕಿಟ್‌ ವಿತರಿಸುವುದಿಲ್ಲ. ನಿಮ್ಮ ನಿಮ್ಮ ಗಲ್ಲಿಗಳಿಗೆ ಬಂದು ವಿತರಿಸಲಾಗುವುದು ಎಂದು ಹೇಳಿ ಕಳುಹಿಸಿದ್ದಾರೆ.