ಧಾರವಾಡ(ಏ.08): ಕೊರೋನಾ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲು ತೆರಳಿದ್ದ ಆಶಾ ಕಾರ್ಯಕರ್ತೆಯರೊಂದಿಗೆ ಇಲ್ಲಿನ ಸಾಯಿ ನಗರದ ಎರಡು ಕುಟುಂಬಗಳ ಸದಸ್ಯರು ಕ್ಯಾತೆ ತೆಗೆದ ಬೇಸರದ ಘಟನೆ ಮಂಗಳವಾರ ನಡೆದಿದೆ.

ಅಲ್ಲಿನ ಮುಲ್ಲಾ ಎಂಬ ಕುಟುಂಬದ ಮನೆಗೆ ಗೋವಾದಿಂದ ನಾಲ್ಕು ಜನರು ಬಂದಿದ್ದರು. ಅವರ ಕುರಿತು ಮಾಹಿತಿ ಪಡೆಯಲು ತೆರಳಿದ ಆಶಾ ಕಾರ್ಯಕರ್ತರಿಗೆ, ನಿಮಗೆ ಏಕೆ ಮಾಹಿತಿ ನೀಡಬೇಕು ಎಂದು ವಾಗ್ವಾದ ನಡೆಸಿದ್ದಾರೆ. ಅಲ್ಲದೇ, ಮುಲ್ಲಾ ಕುಟುಂಬ ಎಂದೂ ಹಾಗೂ 20 ಜನ ಎಂದು ಬರೆದುಕೊಂಡು ಹೋಗಿ ಎಂದು ಉಡಾಫೆಯಾಗಿ ವರ್ತಿಸಿದ್ದಾರೆ. ಈ ಕುರಿತು ಆಶಾ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. 

ಕೊರೋನಾ ಮಧ್ಯೆಯೂ ಪೌರ ಕಾರ್ಮಿಕರ ಶ್ರಮ: ಇವರಿಗೇಕಿಲ್ಲ ವಿಮೆ?

ಆಶಾ ಕಾರ್ಯಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಮಾಹಿತಿ ಬಂದ ಕೂಡಲೇ ಉಪ ನಗರ ಪೊಲೀಸರು ಸ್ಥಳಕ್ಕೆ ಹೋಗಿ ಆ ಕುಟುಂಬಕ್ಕೆ ತಿಳಿ ಹೇಳಿ, ಗೋವಾದಿಂದ ಬಂದ ಸದಸ್ಯರ ಮಾಹಿತಿ ಪಡೆದು, ಅವರ ಕೈಗೆ ಶಾಯಿ ಗುರುತು ಹಾಕಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ಇರಲು ತಾಕೀತು ಮಾಡಿ ಬಂದಿದ್ದಾರೆ. ಈ ಘಟನೆ ಕುರಿತು ಆ ಕುಟುಂಬ ಕ್ಷಮೆ ಸಹ ಕೇಳಿದೆ ಎಂದು ಎಸಿಪಿ ಅನುಷಾ ಅವರು ತಿಳಿಸಿದರು.