ಬೆಂಗಳೂರು(ಏ.01): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾ. 30ರ ಅಂಕಿ ಅಂಶದ ಪ್ರಕಾರ 39 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 16 ಜನರು ಯುವಜನರಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

39 ಸೋಂಕು ಪ್ರಕರಣಗಳಲ್ಲಿ 19 ಮಹಿಳೆ, 20 ಪುರುಷ ಸೋಂಕಿತರಾಗಿದ್ದಾರೆ. ಇದರಲ್ಲಿ 10 ವರ್ಷದೊಳಗಿನ ಒಂದು ಮಗು ಸಹ ಸೇರಿದೆ. ಇನ್ನುಳಿದವರು 23 ಮಂದಿಯು 30 ವರ್ಷದಿಂದ 70 ವರ್ಷದವರಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಎಂಟು ವಲಯಗಳಲ್ಲಿ ಅತಿ ಹೆಚ್ಚು 12 ಸೋಂಕು ಪ್ರಕರಣಗಳು ಪೂರ್ವ ವಲಯದಲ್ಲಿ ಕಂಡು ಬಂದಿದೆ. ಉಳಿದಂತೆ ದಕ್ಷಿಣ ವಲಯದಲ್ಲಿ 8, ಮಹದೇವಪುರದಲ್ಲಿ 7, ಬೊಮ್ಮನಹಳ್ಳಿಯಲ್ಲಿ 6, ಪಶ್ಚಿಮ 4, ಆರ್‌.ಆರ್‌.ನಗರ ಹಾಗೂ ಯಲಹಂಕ ವಲಯದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ.

ಸೋಂಕು ದೃಢಪಟ್ಟವ್ಯಕ್ತಿಯೊಂದಿಗೆ ಪ್ರಾಥಮಿಕ ಹಾಗೂ ಪರೋಕ ಸಂಪರ್ಕ ಹೊಂದಿದ್ದ 14,910 ಮಂದಿಯನ್ನು ಹೋಮ್‌ ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಅದರಲ್ಲಿ ಮಾ.31ರ ವರೆಗೆ 10,248 ಮಂದಿಯ ಹೋಮ್‌ ಕ್ವಾರಂಟೈನ್‌ ಅವಧಿ ಮುಗಿದಿದೆ.

ನಗರದಲ್ಲಿ ಮೊದಲ ಕೊರೋನಾ ಸೋಂಕು ಪ್ರಕರಣ ಮಾ.8ರಂದು ಪತ್ತೆಯಾಗಿತ್ತು. ಆದಾದ ನಂತರ ಪ್ರತಿದಿನ ಸೋಂಕು ಪ್ರಕರಣಗಳು ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದ್ದವು. ಆದರೆ, ಮಾ.27ರಿಂದ ಮಾ.30ರವರೆಗೆ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.