ಮದ್ಯವಿಲ್ಲದೆ ವೃದ್ಧ ನೇಣು ಬಿಗಿದು ಆತ್ಮಹತ್ಯೆ
ಉಡುಪಿಯ ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಸುಭಾಶ್ ನಗರ ಎಂಬಲ್ಲಿನ ಪಾಂಡು ಪೂಜಾರಿ (68) ಎಂಬವರು ಕುಡಿಯುವುದಕ್ಕೆ ಮದ್ಯ ಸಿಗದೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಡುಪಿ(ಎ.01): ಇಲ್ಲಿ ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಸುಭಾಶ್ ನಗರ ಎಂಬಲ್ಲಿನ ಪಾಂಡು ಪೂಜಾರಿ (68) ಎಂಬವರು ಕುಡಿಯುವುದಕ್ಕೆ ಮದ್ಯ ಸಿಗದೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಪರೀತ ಮದ್ಯಪಾನ ಮಾಡುತ್ತಿದ್ದ ಪಾಂಡು ಪೂಜಾರಿ ಅವರು ಸೋಮವಾರ ರಾತ್ರಿ ಮನೆ ಸಮೀಪದ ನಾಯಕ್ ಕಂಪೌಂಡ್‌ನಲ್ಲಿರುವ ಗೇರು ಮರಕ್ಕೆ ನೈಲಾನ್ ಹಗ್ಗ ಕಟ್ಟಿನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟ ಇಲ್ಲದೆ ಇದುವರೆಗೆ ಒಟ್ಟು 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಹತಾಶೆಗೊಳಗಾಗಿ ಸೋಮವಾರ ಮತ್ತಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಒಟ್ಟಾರೆ ಮಾ.24ರಿಂದೀಚೆಗೆ ಮದ್ಯ ಸಿಗದೆ ರಾಜ್ಯದಲ್ಲಿ 15 ಮಂದಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ.
ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!
ಕೋಲಾರ ಜಿಲ್ಲೆಯ ಬಂಗಾರಪೇಟೆಯ ದೊಡ್ಡೂರು ಗ್ರಾಮದ ಗಾರೆ ಕೆಲಸಗಾರ ಆನಂದ್(30), ಶಿವಮೊಗ್ಗದ ಸಾಗರದ ಹಮಾಲಿ ಕೆಲಸಗಾರ ರಾಮಚಂದ್ರ (45) ಆತ್ಮಹತ್ಯೆ ಮಾಡಿಕೊಂಡವರು. ಇನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದಲ್ಲಿ ಎಂ.ಶಂಕರ(36) ಮನೆಯಲ್ಲೇ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ರಕ್ತಸ್ರಾವದೊಂದಿಗೆ ಒದ್ದಾಡುತ್ತಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾಪು ತಾಲೂಕೊಂದರಲ್ಲೇ ಮೂರು ಮಂದಿ ಸೇರಿ ಮಾ.24ರಿಂದ ಈವರೆಗೆ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.