ಯಾದಗಿರಿ(ಏ.04): ದೆಹಲಿ ನಿಜಾಮುದ್ದೀನ್ ಸಭೆಗೆ ತೆರಳಿದ್ದ ಜಿಲ್ಲೆಯ ಐವರಲ್ಲಿ ಮೂವರ ಪ್ರಯೋಗಾಲಯ ವರದಿಗಳು ‘ನೆಗೆಟಿವ್’ ಎಂದು ಬಂದಿದ್ದು, ಇನ್ನೂ ಇಬ್ಬರು ಸೇರಿದಂತೆ ಒಟ್ಟು ಏಳು ಜನರ ರಿಪೋರ್ಟ್‌ಗಳು ಬಾಕಿಯಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

"

ಮೂವರ ರಿಪೋರ್ಟ್‌ಗಳು ನೆಗೆಟಿವ್ ಬಂದಿದ್ದರೂ, ನಿಯಮಗಳ ಪ್ರಕಾರ ಮತ್ತೊಮ್ಮೆ ಎಲ್ಲರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಮಾದರಿ ಸಂಗ್ರಹಿಸಿ ಶನಿವಾರ ಕಳುಹಿಸಲಾಗುತ್ತದೆ ಎಂದು ಡಿಎಚ್‌ಓ ಡಾ. ಎಂ. ಎಸ್. ಪಾಟೀಲ್ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

ಲಾಕ್‌ಡೌನ್ ಆದೇಶ ಉಲ್ಲಂಘಣೆ: ಒಂದೇ ದಿನ ಬರೋಬ್ಬರಿ 855 ಬೈಕ್‌ ವಶ

ನೋವೆಲ್ ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಕಳುಹಿಸಿದ ಒಟ್ಟು 16 ವ್ಯಕ್ತಿಗಳ ಮಾದರಿಗಳ ಪೈಕಿ ಶುಕ್ರವಾರ ಮತ್ತೆ ಮೂವರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ಒಂಬತ್ತು ಮಾದರಿಗಳ ವರದಿ ನೆಗೆಟಿವ್ ಬಂದಂತಾಗಿದೆ. ಬಾಕಿ ಏಳು ಮಾದರಿಗಳ ವರದಿ ಬರಬೇಕಿದೆ.

ಯಾದಗಿರಿ ತಾಲೂಕಿನಲ್ಲಿ 30 ಜನ, ಶಹಾಪೂರ ತಾಲ್ಲೂಕಿನಲ್ಲಿ 19 ಹಾಗೂ ಸುರಪುರ ತಾಲ್ಲೂಕಿನಲ್ಲಿ 22 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 71 ಜನ ವಿದೇಶಗಳಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಿರುವುದಿಲ್ಲ. ಕಾರಣ ಇವರಿಗೆ ಹೋಂ ಐಸೊಲೇಷನ್ ವ್ಯವಸ್ಥೆ ಮಾಡಲಾಗಿದೆ. ಈ 71 ಜನರ ಪೈಕಿ ಒಟ್ಟು 11 ಜನ 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದು, ಬಾಕಿ 60 ಜನರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಪ್ರತ್ಯೇಕವಾಗಿರಿಸಿದ್ದ ಮೂವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, ಇನ್ನೂ ಇಬ್ಬರು ಜಿಲ್ಲಾಸ್ಪತ್ರೆಯಲ್ಲಿದ್ದಾರೆ. ಅರಕೇರಾ (ಕೆ) ಹಾಸ್ಟೆಲ್‌ನ ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್‌ನಲ್ಲಿ 24 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿ ಯಾದಗಿರಿ ಜಿಲ್ಲೆಗೆ ವಾಪಸ್ಸಾಗಿರುವ ಜನರು ಕಂಡುಬಂದಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 08473-253950 ಗೆ ಕರೆ ಮಾಡಿ ಮಾಹಿತಿ ನೀಡಲು ಅಪರ ಜಿಲ್ಲಾಧಿಕಾರಿ ಕೋರಿದ್ದಾರೆ.