ಬೆಂಗಳೂರು(ಏ.07): ಇಡೀ ಜಗತ್ತಿಗೆ ಕೊರೋನಾ ವೈರಸ್‌ ಹರಡಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಪಕ್ಷ, ಧರ್ಮ ಬದಿಗಿರಿಸಿ ಒಟ್ಟಾಗಿ ಹೋರಾಡುವುದಕ್ಕಾಗಿ ಪಕ್ಷದ ವತಿಯಿಂದ ಕಾರ್ಯಪಡೆ ರಚಿಸಲಾಗಿದೆ. ವಾರ್‌ರೂಂ ಕೂಡ ಆರಂಭಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ‘ಕೊರೋನಾ ಟಾಸ್ಕ್‌ಫೋರ್ಸ್‌ ಸಭೆ’ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ನಿಭಾಯಿಸಿದ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಮಾಜಿ ಸಚಿವ ಕೃಷ್ಣ ಬೈರೇಗೌಡರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ‘ವಾರ್‌ ರೂಮ್‌’ ಆರಂಭಿಸಲಾಗಿದೆ. ಅವರು ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ವಾರ್‌ ರೂಮ್‌ ರಚಿಸಿ ಜನರ ಸಮಸ್ಯೆ ಹಾಗೂ ಅಹವಾಲು ಸ್ವೀಕರಿಸಲಾಗುತ್ತದೆ. ಅಗತ್ಯ ಮಾಹಿತಿ, ಆಹಾರ ವಿತರಣೆ ಮತ್ತು ಆರೋಗ್ಯ ರಕ್ಷಣೆಗೆ ಬೇಕಾದ ಸಾಮಗ್ರಿಗಳನ್ನು ಹಂಚಲಾಗುತ್ತದೆ. ಈ ಮೂಲಕ ವಾರ್‌ ರೂಮ್‌ ಮತ್ತು ಕಾರ್ಯಪಡೆ ಜನರಿಗೆ ಸಹಾಯ ಮಾಡಲಿದೆ ಎಂದು ಹೇಳಿದರು.

ಕೊರೋನಾ ಎದು​ರಿ​ಸಲು ರಾಜ್ಯದಲ್ಲಿ ಭರ್ಜರಿ ಸಿದ್ಧತೆ, ಲಾಕ್‌​ಡೌನ್‌ ತೆರವು ಕಷ್ಟ!

ಕೊರೋನಾ ಸಮಸ್ಯೆ ಬಗೆಹರಿದ ಬಳಿಕ ದೊಡ್ಡ ಆರ್ಥಿಕ ಸವಾಲು ಎದುರಾಗಲಿದೆ. ಮುಂಜಾಗ್ರತಾ ಕ್ರಮವಾಗಿ ಪಕ್ಷದ ರಾಷ್ಟ್ರಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆದು ಚರ್ಚೆ ಮಾಡುವಂತೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‌ಗೌಡರನ್ನು ಸಂಚಾಲಕನ್ನಾಗಿ ಮಾಡಿ ಹತ್ತು ಸದಸ್ಯರನ್ನು ಒಳಗೊಂಡ ‘ವಿಷನ್‌ ಕರ್ನಾಟಕ’ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಸವಾಲನ್ನು ಹೇಗೆ ಎದುರಿಸಬೇಕು, ಎಲ್ಲ ವರ್ಗದ ಜನರಿಗೆ ಹೇಗೆ ಸಹಾಯ ಮಾಡಬೇಕು, ಯಾವ ರೀತಿಯ ಪ್ಯಾಕೇಜ್‌ ಘೋಷಿಸಬೇಕು ಎಂಬ ಮಾರ್ಗಸೂಚಿ ರಚಿಸಲಿದೆ ಎಂದು ಹೇಳಿದರು.

ಕೊರೋನಾ ವಿಚಾರದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ ಸೇರಿದಂತೆ ಕೆಲವು ಸಂಘಟನೆಗಳು ಒಂದೊಂದು ರಾಜಕೀಯ ಹೇಳಿಕೆ ನೀಡುತ್ತಿವೆ. ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯಬಿಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

'ಎಸ್ಸೆಸ್ಸೆಲ್ಸಿ, ಪಿಯುಗೆ ಪರೀಕ್ಷೆ ಬರೆಯದೇ ಪಾಸ್‌ ಇಲ್ಲ'

ಶೇ.60ರಷ್ಟುಶಾಸಕರಿಂದ ಕೊರೋನಾ ನಿಧಿಗೆ ದೇಣಿಗೆ

ಬೆಂಗಳೂರು: ಕೊರೋನಾ ಪರಿಸ್ಥಿತಿ ನಿಭಾಯಿಸಲು ಸ್ಥಾಪಿಸಿರುವ ಕಾಂಗ್ರೆಸ್‌ ಕೊರೋನಾ ಪರಿಹಾರ ನಿಧಿಗೆ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಕನಿಷ್ಠ ಒಂದು ಲಕ್ಷ ರು. ದೇಣಿಗೆ ನೀಡುವಂತೆ ಹೇಳಿದ್ದೆವು. ಈಗಾಗಲೇ ಶೇ. 60ರಷ್ಟುಶಾಸಕರು ದೇಣಿಗೆ ನೀಡಿದ್ದಾರೆ. ಕೆಲವರು ಹೊರ ಊರುಗಳಲ್ಲಿ ಇರುವುದರಿಂದ ಚೆಕ್‌ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಆರ್‌ಟಿಜಿಎಸ್‌ ಮಾಡುತಿದ್ದಾರೆ. ಇನ್ನು ಮಾಜಿ ಶಾಸಕರು, ಕಾರ್ಯಕರ್ತರಿಗೂ ಮನವಿ ಮಾಡಿದ್ದು, ಸ್ಥಳೀಯವಾಗಿ ನಿಮ್ಮ ಸೇವೆ ಮಾಡಿ ನಂತರ ಕೈಲಾದಷ್ಟುದೇಣಿಗೆ ನೀಡಿ ಎಂದು ಮನವಿ ಮಾಡಿದ್ದೇವೆ. ಹಣ ಸಂಗ್ರಹವಾದ ಬಳಿಕ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಕಾರ್ಯಪಡೆ ಸಲಹೆ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.