ಬೆಂಗಳೂರು(ಮಾ.29): ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್‌ ಘೋಷಿಸಿದ್ದರೂ, ರಾಜ್ಯದ ಸಾಮಾನ್ಯ ಜನತೆಯ ಸಣ್ಣಪುಟ್ಟಕಾಯಿಲೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ತೆರೆದಿರಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದ್ದಾರೆ.

ಶನಿವಾರ ಸಂಜೆ ಸುವರ್ಣ ಸುದ್ದಿವಾಹಿನಿಯಲ್ಲಿ ಪಾಲ್ಗೊಂಡು ವೀಕ್ಷಕರೊಂದಿಗೆ ಸಂವಾದ ನಡೆಸಿದ ಅವರು, ಕೊರೋನಾ ತಡೆಯಲು ಸರ್ಕಾರ ಸಾಕಷ್ಟುಹೋರಾಟ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ಸಹಕಾರ ನೀಡಬೇಕಾಗಿದೆ. ಅಗತ್ಯವಿದ್ದಲ್ಲಿ ಸ್ವಯಂ ರಕ್ಷಣಾ ಕಿಟ್‌ಗಳನ್ನು ಸರ್ಕಾರಿದಿಂದ ಒದಗಿಸಲು ಸಿದ್ಧವಿದ್ದು, ವೈದ್ಯರು ಜನರ ಸೇವೆಯಲ್ಲಿ ನಿರತರಾಗಬೇಕು. ಇಲ್ಲವಾದಲ್ಲಿ ವೈದ್ಯರು ಅಮಾನವೀಯತೆ ತೋರಿದಂತಾಗಲಿದೆ ಎಂದರು.

ಸಂಪರ್ಕಕ್ಕೆ ಕಡಿವಾಣ ಹಾಕದಿದ್ದಲ್ಲಿ ಸಮಸ್ಯೆ:

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವವರಿಗೆ ಕೊರೋನಾ ಸೋಂಕು ಇದ್ದರೂ ರೋಗದ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ, ಅವರ ಸಂಪರ್ಕದಲ್ಲಿರುವವರ ಜೀವಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ದೇಶದಲ್ಲಿ ಯಾವ ಕಾರಣಕ್ಕೆ ಲಾಕ್‌ಡೌನ್‌ ಮಾಡಲಾಗಿದೆ ಎಂಬುದನ್ನು ಜನ ಗಂಭೀರವಾಗಿ ಪರಿಗಣಿಸಬೇಕು. ಸೋಂಕು ನಮಗೆ ಬರುವುದಿಲ್ಲ ಎಂಬ ಮನೋಭಾವ ಬಿಡಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಸುಧಾಕರ್‌ ಎಚ್ಚರಿಸಿದರು.

ಬೆಂಗಳೂರು ನಗರದಲ್ಲಿ 22 ಸಾವಿರ ಜನ ಕ್ವಾರಂಟೈನ್‌ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಇವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಆರು ಸಾವಿರ ಜನಕ್ಕೆ ಮುದ್ರೆ ಹಾಕುವ ಕೆಲಸ ನಡೆಯುತ್ತಿದೆ. ಶನಿವಾರ ಸಂಜೆ ವೇಳೆಗೆ ಮುದ್ರೆ ಹಾಕುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಅಸ್ತಮಾ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೋನಾ ವೈರಸ್‌ ಹೆಚ್ಚು ಅಪಾಯಕಾರಿ. ಈ ಸೋಂಕಿಗೆ ಔಷಧ ಪತ್ತೆ ಹಚ್ಚುವವರೆಗೂ ಇದೇ ವ್ಯವಸ್ಥೆ ಮುಂದುವರೆಯಲಿದೆ. ಜೊತೆಗೆ, 60 ವರ್ಷಕ್ಕೆ ಮೇಲ್ಪಟ್ಟಹಿರಿಯ ನಾಗರಿಕರನ್ನು ಸುರಕ್ಷತೆಯಿಂದ ನೋಡಿಕೊಳ್ಳಬೇಕು ಎಂದರು.

ಸೋಷಿಯಲ್‌ ಮೀಡಿಯಾ ಬಗ್ಗೆ ಆತಂಕ ಬೇಡ:

ಭಾರತದ ಚಿತ್ರಣ ಮತ್ತು ಜಗತ್ತಿನ ಚಿತ್ರಣಕ್ಕೂ ತುಂಬಾ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಆಶಾಭಾವನೆಯಿಂದ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಅನುಸರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಹೇಳಿದರು.

ಪ್ರತಿ ದಿನ ದುಡಿದು ತಿನ್ನುವ ದಿನಗೂಲಿ ಕಾರ್ಮಿಕರ ಊಟಕ್ಕಾಗಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದು, ಸರ್ಕಾರದಿಂದ ಉಚಿತ ಊಟ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ 200 ಕಲ್ಯಾಣ ಮಂಟಪಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪೆಟ್ರೊಲ್‌ ಬಂಕ್‌ ಬಂದ್‌ ಇಲ್ಲ

ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಿಗೆ ದಿನನಿತ್ಯ ಆಹಾರ ಪದಾರ್ಥಗಳು, ತರಕಾರಿ, ಹಾಲು ಬರಬೇಕಾಗಿದೆ. ಈ ನಿಟ್ಟಿನಲ್ಲಿ ಹಲವು ವಾಹನಗಳ ಸಂಚಾರ ಅತ್ಯಗತ್ಯ. ಆದ್ದರಿಂದ ಪೆಟ್ರೋಲ್‌ ಬಂಕ್‌ಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.