ಬೆಂಗಳೂರು, (ಮಾ.31): ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ನಾವೆಲ್ಲ ನೆಮ್ಮದಿಯಿಂದ ಕುಳಿತಿದ್ದರೆ ಅತ್ತ ವೈದ್ಯರು ಸೇರಿದಂತೆ ಎಲ್ಲ ಸಿಬಂದಿ ವರ್ಗದವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟದ ವೈದ್ಯರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಲಾಂ ಹೇಳಿದ್ದಾರೆ.

ಲಾಕ್‌ಡೌನ್ ಅಂದ್ರೆ ಏನು? ಈ ಹಳ್ಳಿ ಜನರರನ್ನು ನೋಡಿ ಕಲೀಬೇಕು!

ಆತ್ಮೀಯ ವೈದ್ಯ ಮಿತ್ರರೇ,

'ವೈದ್ಯ' ಎಂಬ ಪದವೂ ದೈವದ ಮೂಲಕವೇ ಸೃಷ್ಟಿಯಾಗಿದೆ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಂದಿನ ಮಹಾಮಾರಿ ಕೊರೊನ ವಿರುದ್ಧದ ಸಮರದಲ್ಲಿ ದೇವರುಗಳು ಬಿಳಿ ಪೋಷಾಕಿನಲ್ಲಿ ನಿಮ್ಮ ಮೂಲಕವಾಗಿ ರಸ್ತೆಗಿಳಿದಿದ್ದಾರೆ. 

ಕಾಯಿಲೆ ಬಿದ್ದ ಜೀವಕ್ಕೆ ಮರುಚೈತನ್ಯ ನೀಡಬಲ್ಲವರು ವೈದ್ಯರು, ವೈದ್ಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ತಮ್ಮ ಜೀವವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿರುವವರು ನರ್ಸಿಂಗ್ ಮತ್ತು ಇತರ ಅರೆವೈದ್ಯಕೀಯ ಸಿಬ್ಬಂದಿ, ಅವರ ನಿಸ್ಪೃಹ ಸೇವೆಯೂ ಶ್ಲಾಘನೀಯ.

ಇಂದು ನಮ್ಮನ್ನೆಲ್ಲ ಕಾಡುತ್ತಿರುವ ಆತಂಕ, ಅಳುಕು, ಅಸಹಾಯಕತೆಗಳಿಗೆ ನೀವು ನಿಮ್ಮ ಜೀವದ ಹಂಗು ತೊರೆದು ಹಚ್ಚುತ್ತಿರುವ ಭರವಸೆಯ ಬೆಳಕಷ್ಟೇ ಉತ್ತರವಾಗಿದೆ. ಮಾರಕ 'ಕೋವಿಡ್-19' ವಿರುದ್ಧದ ಹೋರಾಟದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರೇ ಭರವಸೆಯ ಬೆಳಕು. ವೈದ್ಯರ ಕಾರ್ಯವನ್ನು ಮೆಚ್ಚಿ ಶ್ರೀ ನರೇಂದ್ರ ಮೋದಿಯವರು ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ರು. 50.00 ಲಕ್ಷಗಳ ವಿಮಾ ಸೌಲಭ್ಯ ಒದಗಿಸಿದ್ದಾರೆ. ಈ ಸೌಲಭ್ಯ 'ಕೋವಿಡ್-19* ವಿರುದ್ಧ ಹೋರಾಟದಲ್ಲಿ ತೊಡಗಿರುವ ಖಾಸಗಿ ವೈದ್ಯ ಮತ್ತು ಆರೋಗ್ಯ ಸಿಬ್ಬಂದಿಗೂ ಕೂಡ ವಿಸ್ತರಿಸಲಾಗಿದೆ. 

ನಮ್ಮ ರಾಜ್ಯ ಸರ್ಕಾರವೂ ಸಹ ವೈದ್ಯರಿಗೆ ಅಗತ್ಯ ನೆರವು ನೀಡುತ್ತಿದೆ. ಇಡೀ ಸಮಾಜ ಇಂದು ನಿಮ್ಮ ಬದ್ಧತೆಯನ್ನು ಗೌರವಿಸುತ್ತದೆ. ನಿಮ್ಮ ಉಪಕಾರವನ್ನು ಸ್ಮರಿಸುತ್ತದೆ.

ನಿಮಗೆ, ನಿಮ್ಮ ಕುಟುಂಬಕ್ಕೆ ಎಂದಿಗೂ ಒಳ್ಳೆಯದಾಗಲೆಂದು ಹಾರೈಸುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾನೂ ಸಹ ಅತ್ಯಂತ ನಮ್ರನಾಗಿ ನಿಮಗೆ ಒಳಿತಾಗಲೆಂದು, ಇಂತಹ ಸಂಕಷ್ಟದ ಸಮಯದಲ್ಲಿ ಸಕಲ ಚೈತನ್ಯದೊಂದಿಗೆ ಕೆಲಸ ಮಾಡುವ ಶಕ್ತಿ ನಿಮಗೆ
ದೊರೆಯಲೆಂದು ಹಾರೈಸುತ್ತೇನೆ.

ನೀವು ಇಂದು ಹೆಚ್ಚುತ್ತಿರುವ ವಿಶ್ವಾಸದ ದೀವಿಗೆ ನಮ್ಮ ಬೆಳಕಿನ ನಾಳೆಗಳನ್ನು ಸೃಷ್ಟಿಸಬಲ್ಲುದು. ವೈದ್ಯೋ ನಾರಾಯಣೋ ಹರಿಃ

ವಿಶ್ವಾಸಗಳೊಂದಿಗೆ
(ಬಿ.ಎಸ್. ಯಡಿಯೂರಪ್ಪ)