ಲಾಕ್‌ಡೌನ್: ಆಂಧ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ವಿದ್ಯಾರ್ಥಿಗಳು
ಕೇಂದ್ರ ಸರ್ಕಾರದ ಬಿಗಿ ನಿಲುವಿನಿಂದ ರಾಜ್ಯಕ್ಕೆ ಕರೆತರುವುದು ಅಸಾಧ್ಯ| ಆಂಧ್ರಪ್ರದೇಶದ ನಂದ್ಯಾಲದಲ್ಲಿ ಬ್ಯಾಂಕಿಂಗ್ ತರಬೇತಿಗೆ ಹೋಗಿದ್ದ ರಾಜ್ಯದ ಸುಮಾರು ಒಂದು ನೂರು ವಿದ್ಯಾರ್ಥಿಗಳು|ಊಟ ಮತ್ತು ವಸತಿಗೆ ಸಂಬಂಧಿಸಿದಂತೆ ತೊಂದರೆಗಳುಂಟಾದಲ್ಲಿ ತಮ್ಮ ಗಮನಕ್ಕೆ ತನ್ನಿ ಎಂದ ಶ್ರೀಗಳು|
ಸಿರಿಗೆರೆ(ಮಾ.30): ಆಂಧ್ರಪ್ರದೇಶದ ನಂದ್ಯಾಲದಲ್ಲಿ ಬ್ಯಾಂಕಿಂಗ್ ತರಬೇತಿಗೆ ಹೋಗಿ ರಾಜ್ಯಕ್ಕೆ ಬರಲಾಗದೆ ಪರಿತಪಿಸುತ್ತಿರುವ ರಾಜ್ಯದ ಸುಮಾರು ಒಂದು ನೂರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿರುವ ಹೊಸ ಆದೇಶದಿಂದ ಈಗ ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಈ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ವಾಪಾಸು ಕರೆಸಿಕೊಳ್ಳಲು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶನಿವಾರ ಸರ್ಕಾರದ ಉನ್ನತ ಮಟ್ಟದಲ್ಲಿ ಸಮಾಲೋಚನೆ ಮಾಡಿದ್ದೂ ಅಲ್ಲದೆ ಸ್ವತಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಡನೆ ದೂರವಾಣಿಯಲ್ಲಿ ಮಾತನಾಡಿದ್ದರು.
12 ಸಚಿವರಿಗೆ ಎರಡೆರಡು ಜಿಲ್ಲೆಗಳ ಕೊರೋನಾ ಹೊಣೆ ; ಸರ್ಕಾರಕ್ಕೆ ಸಂಕಷ್ಟ
ಮುಖ್ಯಮಂತ್ರಿ ವೈಯಕ್ತಿಕವಾಗಿ ಗಮನಹರಿಸಿ ಈ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಸೂಕ್ತ ಚಿಕಿತ್ಸೆಗೆ ಒಳಪಡಿಸುವುದಾಗಿಯೂ, ಸೋಂಕು ಇಲ್ಲದಿರುವುದು ದೃಢಪಟ್ಟ ನಂತರ ಅವರನ್ನು ಊರುಗಳಿಗೆ ಕಳುಹಿಸಲಾಗುವುದೆಂದು ಭರವಸೆ ನೀಡಿದ್ದರು.
ಆಂಧ್ರದ ಕರ್ನೂಲು ಜಿಲ್ಲಾ ಕಲೆಕ್ಟರ್ ಜೊತೆಗೆ ಸಂಪರ್ಕಿಸಿ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಮಾಡುವಂತೆ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಹಾಗಾಗಿ ಭಾನುವಾರ ಮಧ್ಯಾಹ್ನದವರೆಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತಲುಪುವ ಬಗ್ಗೆ ಸಂತೋಷದಿಂದಲೇ ಇದ್ದರು. ಆದರೆ ಇಂದು ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಇಲಾಖೆಯು ಬಿಗಿಯಾದ ನಿಲುವುಗಳನ್ನು ಪ್ರಕಟಿಸಿರುವುದರಿಂದ ಈ ವಿದ್ಯಾರ್ಥಿಗಳು ಸದ್ಯಕ್ಕೆ ರಾಜ್ಯಕ್ಕೆ ಹಿಂದಿರುಗುವುದು ಅಸಾಧ್ಯವಾಗಿದೆ.
ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ತುರ್ತು ಸಂದೇಶ ಕಳಿಸಿರುವ ಶ್ರೀಗಳು ನಿಮ್ಮನ್ನು ಕರೆತರುವ ಎಲ್ಲಾ ಸಿದ್ಧತೆಗಳು ಆಗುತ್ತಿರುವಾಗಲೇ ಕೇಂದ್ರ ಸರ್ಕಾರದಿಂದ ಬಿಗಿ ನಿಲುವು ಪ್ರಕಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಧೃತಿಗೆಡದೆ ಧೈರ್ಯದಿಂದ ಇರಿ. ಈಗ ನೀವು ವಾಸಿಸುತ್ತಿರುವ ಮನೆಗಳನ್ನು ಮಾಲೀಕರು ತೆರವುಗೊಳಿಸುವಂತಿಲ್ಲ. ನಿಮಗೆ ಊಟ ಮತ್ತು ವಸತಿಗೆ ಸಂಬಂಧಿಸಿದಂತೆ ತೊಂದರೆಗಳುಂಟಾದಲ್ಲಿ ತಮ್ಮ ಗಮನಕ್ಕೆ ತನ್ನಿ ಎಂದು ಶ್ರೀಗಳು ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿ ಸಮುದಾಯಕ್ಕೆ ಸಮಾಧಾನ ಹೇಳಿದ್ದಾರೆ.