ಬಂಟ್ವಾಳ(ಮಾ.28): ಕೇರಳದ ಕಾಸರಗೋಡಿನ ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವೊಂದಕ್ಕೆ ಕೊರೋನಾ ಸೋಂಕು ದೃಢಪಟ್ಟಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಅಪ್ಪ-ಅಮ್ಮ ಸೇರಿ ಕುಟುಂಬದವರಾರ‍ಯರೂ ವಿದೇಶಕ್ಕೆ ಹೋಗಿ ಬಂದಿಲ್ಲ. ಆದರೂ ಈ ಪುಟ್ಟಮಗುವಿಗೆ ಸೋಂಕು ತಲುಲಿರುವುದು ತೀವ್ರ ಆತಂಕ ಮೂಡಿಸಿದೆ. ಕೇರಳದಲ್ಲಿರುವ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದಲೇ ಈ ಸೋಂಕು ತಗುಲಿತೇ ಎನ್ನುವ ಅನುಮಾನ ಈಗ ಕಾಡಲು ಶುರುವಾಗಿದೆ.

ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ಮಾ.23 ರಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಗುವಿನಲ್ಲಿ ಶಂಕಿತ ಕೊರೊನಾ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿಯನ್ನು ಬುಧವಾರ ಪರೀಕ್ಷೆಗೆ ರವಾನಿಸಲಾಗಿತ್ತು. ಗುರುವಾರ ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್‌ ಬಂದಿತ್ತು. ವಿಶೇಷ ಎಂದರೆ ಈ ಮಗುವಿನ ಕುಟುಂಬ ಕೊರೊನಾ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸಿರಲಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಮಗು ಸಮೇತ ಈ ಕುಟುಂಬ ಕೇರಳದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಬಂದಿರುವ ಮಾಹಿತಿ ಇದ್ದು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮಗುವಿನಲ್ಲಿ ಸೋಂಕು ಕಂಡುಬಂದ ಹಿನ್ನಲೆಯಲ್ಲಿ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅಲ್ಲದೆ ಹತ್ತಿರ ಸಂಬಂಧಿಗಳನ್ನೂ ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಇನ್ನು ಮಗುವಿನ ಸ್ವಾ$್ಕಬ್‌ ಮತ್ತು ರಕ್ತದ ಮಾದರಿ ಮತ್ತೆ ಮರು ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮುನ್ನೆಚ್ಚರಿಕ ಕ್ರಮವಾಗಿ ಸಜಿಪನಡು ಗ್ರಾಮವನ್ನು ಕ್ವಾರಂಟೈನ್‌ ಮಾಡಲಾಗಿದೆ. ಯಾವುದೇ ವ್ಯಕ್ತಿಗಳು ಸಜಿಪನಡು ಗ್ರಾಮದಿಂದ ಹೊರಗೆ ಹಾಗೂ ಒಳಗೆ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.