ಬಾಳೆಹೊನ್ನೂರು(ಮಾ.30): ಬಾಳೆಹೊನ್ನೂರು ಹಾಗೂ ಮಾಗುಂಡಿ ಕಂದಾಯ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 81 ಜನರನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಮಾಹಿತಿ ನೀಡಿದ್ದಾರೆ. 

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾನುವಾರ ಕೊರೋನಾ ಸೋಂಕಿನ ಕುರಿತು ಮಾಹಿತಿ ಹಾಗೂ ಕೆಎಫ್‌ಡಿ ಕುರಿತು ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ವಿದೇಶಗಳಿಂದ ಬಂದ 31 ಜನ ಹಾಗೂ ಹೊರ ರಾಜ್ಯಗಳಿಂದ ಬಂದ 50 ಜನರನ್ನು ಹೋಂ ಕ್ವಾರೆಂಟೈನ್‌ನಲ್ಲಿಟ್ಟು ಅವರ ಕುರಿತು ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಹೋಂ ಕ್ವಾರಂಟೈನ್‌ಲ್ಲಿದ್ದವರ ಬೇಕಾಬಿಟ್ಟಿ ಓಡಾಟ: ಇಬ್ಬರ ಮೇಲೆ ಕೇಸ್‌!

ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದಿಂದ ಬಂದಿದ್ದು, ಅವರಲ್ಲಿ ಕೊರೋನಾ ಕುರಿತು ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗಳನ್ನು ನಡೆಸಿದ್ದು ಕೊರೋನಾ ನೆಗೆಟಿವ್‌ ವರದಿ ಬಂದಿದೆ. ಮಲೆನಾಡಿನಲ್ಲಿ ಶೀಘ್ರದಲ್ಲಿ ಮಳೆಗಾಲ ಆರಂಭವಾಗುವ ಹಿನ್ನೆಲೆ ಪ್ರಗತಿಯಲ್ಲಿದ್ದ ಸೇತುವೆಗಳ ಬೈಪಾಸ್‌ ರಸ್ತೆ ಕಾಮಗಾರಿಯನ್ನು ಮಾತ್ರ ನಡೆಸಲು ವಿಶೇಷ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಕಾರ್ಮಿಕರು ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಲ್ಡೋಸ್‌ ಟಿ.ವರ್ಗೀಸ್‌, ಡಾ.ಪ್ರವೀಣ್‌, ತಾಪಂ ಸದಸ್ಯ ಟಿ.ಎಂ.ನಾಗೇಶ್‌, ಗ್ರಾಪಂ ಸದಸ್ಯ ಮಹಮ್ಮದ್‌ ಹನೀಫ್‌, ಬಿ.ಕೆ. ಮಧುಸೂದನ್‌, ಪಿಎಸ್‌ಐ ಶಂಭುಲಿಂಗಯ್ಯ, ಆರ್‌ಎಫ್‌ಓ ನಿರಂಜನ್‌, ಆರೋಗ್ಯ ನಿರೀಕ್ಷಕ ಭಗವಾನ್‌, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್‌.ಜಯಪ್ರಕಾಶ್‌, ಕ್ಷೇತ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ಸಿ.ಸಂತೋಷ್‌ಕುಮಾರ್‌ ಮತ್ತಿತರರು ಹಾಜರಿದ್ದರು.

ಒಬ್ಬನಲ್ಲಿ ಕೆಎಫ್‌ಡಿ ಪತ್ತೆ

ಬಾಳೆಹೊನ್ನೂರಿನ ಹಲಸೂರು ಎಸ್ಟೇಟ್‌ನಲ್ಲಿ ವ್ಯಕ್ತಿಯೊಬ್ಬರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿದೆ ಎಂದು ಶಾಸಕ ರಾಜೇಗೌಡ ಹೇಳಿದರು.ಸೋಂಕಿತ ವ್ಯಕ್ತಿ ಈಗಾಗಲೇ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಫ್‌ಡಿ ಸೋಂಕು ಕಂಡುಬಂದಿರುವ 5 ಕಿ.ಮೀ. ವ್ಯಾಪ್ತಿಯಲ್ಲಿ ಇಂದಿನಿಂದಲೇ ಮನೆ ಮನೆಗೆ ತೆರಳಿ ವ್ಯಾಕ್ಸಿನ್‌ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ಕಾಡಿಗೆ ತೆರಳುವ ಕಾರ್ಮಿಕರಿಗೆ ಮೈಗೆ ಹಚ್ಚಿಕೊಳ್ಳಲು ಮೈಲಾಲ್‌ ಎಣ್ಣೆ (ಡಿಎಂಪಿ ಆಯಿಲ್‌) ಹಾಗೂ ದನದ ಕೊಟ್ಟಿಗೆಗೆ ಸಿಂಪಡಿಸಲು ಮೆಲಾಥಿನ್‌ ಪೌಡರ್‌ ವಿತರಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.