ಬೆಂಗಳೂರು, (ಮಾ.23): ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇನ್ನು ಕೆಲ ದೇಶಗಳಲ್ಲಿ ಕೊರೋನಾ ವೈರಸ್ ಮಿತಿ ಮೀರಿ ಹೋಗಿದ್ದು, ಅಲ್ಲಿನ ವೈದ್ಯರಿಗೆ ಮತ್ತು ಸರ್ಕಾರಗಳಿಗೆ ದಿಕ್ಕುತೋಚದಂತಾಗಿದೆ.

ಇನ್ನು ಇತ್ತ ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಕೊರೋನಾ ಕೇಸ್‌ಗಳು ಏರಿಕೆಯಾಗುತ್ತಲೇ ಇವೆ. ಇದನ್ನು ನಿಯಂತ್ರಿಸಲು ಸರ್ಕಾರ ಸಹ ಇನ್ನಿಲ್ಲದ ಕಸರತ್ತು ನಡೆಸಿದೆ.

ಇಂದು (ಸೋಮವಾರ) ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ತಜ್ಞ ವೈದ್ಯರೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿದರು.

ಎಲ್ಲ 30 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲು ಕರ್ನಾಟಕ ಚಿಂತನೆ ?

ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವಥ್ ನಾರಾಯಣ್, ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕೊರೋನಾ ನಿಯಂತ್ರಣ ಕುರಿತಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ತಜ್ಞ ವೈದ್ಯರೊಂದಿಗೆ  ನಡೆಸಿದ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.

* ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞವೈದ್ಯರು ಹಾಗೂ ಪರಿಣಿತರಿಗೆ ಮನವಿ ಮಾಡಲಾಗಿದೆ.
* ಸರ್ಕಾರ ಪರಿಣಿತರು ನೀಡಿರುವ ಸಲಹೆಗಳನ್ನ ಗಂಭೀರವಾಗಿ ಪರಿಗಣಿಸಲಿದೆ.
* ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನ ಕ್ವಾರಂಟೈನ್‌ಗಳಲ್ಲಿ ಇಡುವುದೇ ದೊಡ್ಡ ಸವಾಲಾಗಿದೆ.
* ಪರಿಣಿತ ತಜ್ಞರು ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ ಎಂದು ಸಲಹೆ ನೀಡಿದ್ದಾರೆ.
* ಫೀವರ್ ಕ್ಲಿನಿಕ್‌ಗಳನ್ನ ಸ್ಥಾಪಿಸಿ ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, 30 ಕ್ಲಿನಿಕ್‌ಗಳನ್ನ ಸ್ಥಾಪಿಸಲಾಗುವುದು.
* ಖಾಸಗಿ ಆಸ್ಪತ್ರೆಯವರು ಶೇ. 50ರಷ್ಟು ವೈದ್ಯರು ಮತ್ತೆ ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನ ಒದಗಿಸಲು ಭರವಸೆ ನೀಡಿದ್ದಾರೆ.
* ನೂರಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ.
* ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್ ಗುರುತಿಸುವ ಜತೆಗೆ ಖಾಸಗಿ ಆಸ್ಪತ್ರೆಯೊಂದನ್ನು ಸಹ ಗುರುತಿಸಲು ಸಹಕರಿಸುವುದಾಗಿ ತಿಳಿಸಿದ್ದಾರೆ.
* ಜನರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು 'ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿ' ಎಂಬ ಘೋಷವಾಕ್ಯವನ್ನು ಪಾಲಿಸಬೇಕಾಗಿದೆ.
* ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ-ಖಾಸಗಿ ಸಹಬಾಗಿತ್ವವನ್ನು ಬಲಪಡಿಸಲು ತೀರ್ಮಾನಿಸಲಾಯಿತು.
* ಕೋವಿಡ್-19 ತಡೆಯುವುದರೊಂದಿಗೆ ಸೋಂಕಿತರ ಚಿಕಿತ್ಸೆಗೂ ಸರ್ಕಾರ ಪೂರ್ವ ಸಿದ್ಧತೆ ನಡೆಸುತ್ತಿದೆ.
* ಸರ್ಕಾರವು ಜನರಿಗೆ ಈ ಸೋಂಕಿನ ಗಂಭೀರತೆಯನ್ನು ಅರಿವು ಮೂಡಿಸಲು ತೀರ್ಮಾನಿಸಲಾಯಿತು.
* ನಗರ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ನಮ್ಮ ಕಳಕಳಿಯ ಮನವಿ, ದಯವಿಟ್ಟು ಕೊರೋನಾ ಸೋಂಕು ಮುಕ್ತವಾಗಿರುವ ಹಳ್ಳಿಗಳಿಗೆ ತೆರಳಬಾರದು, ಸೋಂಕು ಹರಡುವುದು ತಡೆಯಲು ಸರ್ಕಾರದೊಂದಿಗೆ ಸಹಕರಿಸಿ ಮನೆಯಲ್ಲೇ ಇರಬೇಕು.

ಸರ್ಕಾರ ಕೈಗೊಂಡ ತೀರ್ಮಾನಗಳು
* ರಾಜ್ಯಾದ್ಯಂತ ಮಾರ್ಚ್ 31ರ ವರೆಗೆ 9 ಜಿಲ್ಲೆಗಳಲ್ಲಿ ಸೆಕ್ಷನ್ 144 ಸೆಕ್ಷನ್ ಮುಂದುವರಿಸಲಾಗುವುದು. ಎಲ್ಲಾ ಅತ್ಯವಶ್ಯಕ ಸೇವೆಗಳನ್ನ ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
* ಸಾರಿಗೆ ಮತ್ತು ಗೃಹ ಇಲಾಖೆಯ ಸಭೆ ನಡೆಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ.
*ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಲಾಯಿತು.
* ಜೀವನೋಪಾಯಕ್ಕೆ ದೈನಂದಿನ ಆದಾಯ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್‌ಲ್ಲಿ ಉಚಿತ ಆಹಾರ ಒದಗಿಸುವುದು.
*ಬೆಂಗಳೂರು ಕರಗ ಉತ್ಸವ ನಡೆಸಲು ಅವಕಾಶ ಇಲ್ಲ. ದೇವಾಲಯ, ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ.
* ಟೆಲಿಕನ್ಸಲ್ಟೇಶನ್‌ಗೆ ಅವಕಾಶ ನೀಡಲಾಗುವುದು. ಚಿಕಿತ್ಸೆ, ಸಲಹೆಗೆ ಹೊರಬರುವ ಅಗತ್ಯ ಇಲ್ಲ.