ಗದಗ(ಏ.08): ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ರಭಸದ ಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿದಿದೆ.

ಅವಳಿ ನಗರದಲ್ಲಿ ಸಂಜೆ 6 ಸುಮಾರಿಗೆ ಆರಂಭವಾದ ರಭಸದ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಯಿಂದ ಜನರಿಗೆ ಆತಂಕ ಸೃಷ್ಟಿಸಿತು. ಮೊದಲೇ ಕೊರೋನಾ ಭೀತಿ ಬೆಂದಿರುವ ಗದಗ ನಗರ ಜನತೆಗೆ ರಭಸದ ಗಾಳಿ ಮಳೆ ಮತ್ತೆ ಭಯದ ಕೂಪಕ್ಕೆ ತಳ್ಳಿತು. ಬಿಟ್ಟು ಬಿಡದೇ ಸುರಿದ ಆಲಿಕಲ್ಲು ಮಳೆಯಿಂದ ಅವಳಿ ನಗರದ ತಗ್ಗು ಪ್ರದೇಶಗಳಿಗೆ ನೀರು ಹೊಕ್ಕು ಜನ ಜೀವನ ಅಸ್ತವ್ಯಸ್ತಗೊಳಿಸಿತು. ಆಲಿಕಲ್ಲು ಮಳೆಯಿಂದಾಗಿ ಹಂಚಿನ ಮನೆಗಳ ಮೇಲೆ ಕಲ್ಲು ಎಸೆದಂತೆ ಭಯಾನಕ ಶಬ್ದ ಉಂಟಾಗಿ ಭೀತಿ ಹೆಚ್ಚಾಯಿತು.

ಲಾಕ್‌ಡೌನ್‌ ಮತ್ತಷ್ಟು ಬಿಗಿ: ವಾರಕ್ಕೆ ಎರಡು ದಿನ ಮಾತ್ರ ತರಕಾರಿ, ಕಿರಾಣಿ!

ಜಿಲ್ಲೆಯಾದ್ಯಂತ ಮಳೆ: 

ಸಮೀಪದ ಮುಳಗುಂದ ಪಟ್ಟಣದಲ್ಲಿ ಬೆಳಗ್ಗೆಯೇ ತುಂತುರು ಮಳೆ ಸುರಿದರೆ, ರೋಣ ಪಟ್ಟಣದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ರಭಸದ ಗಾಳಿಯೊಂದಿಗೆ ಮಳೆ ಸುರಿಯಿತು. ಹೊಳೆ ಆಲೂರಿನಲ್ಲಿಯೂ ಸುಮಾರು 20 ನಿಮಿಷಗಳ ಕಾಲ ಗುಡುಗು ಸಹಿತ ಮಳೆ ಸುರಿಯಿತು. ಮುಂಡರಗಿ, ಶಿರಹಟ್ಟಿನರಗುಂದ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಗುಡುಗಿನ ಆರ್ಭಟದೊಂದ ಮಳೆಯಾಟ ಜನರನ್ನು ಭೀತಿಗೊಳಿಸಿತು.
ಒಂದೆಡೆ ಕೊರೋನಾ ಹರಡದಂತೆ ಲಾಕ್‌ಡೌನ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ರಫ್ತು ಮಾಡಲಾಗದೇ ಸಂಕಷ್ಟ ಎದುರಿಸಿದ್ದ ರೈತನಿಗೆ, ಗಾಯದ ಮೇಲೆ ಬರೆ ಎಳೆದಂತೆ ಮಳೆರಾಯ ಮತ್ತೊಂದು ಕಂಟಕ ತಂದಿಟ್ಟಿದ್ದಾನೆ.

ಈ ಸಂದರ್ಭದಲ್ಲಿ ಗಾಳಿ ಸಮೇತ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬಾಳೆ ಬೆಳೆ ಹಾನಿಯಾಗುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಮಲ್ಲೇಶ ಲಮಾಣಿ ಎಂಬ ರೈತ ಬೆಳೆದಿದ್ದ ಅಪಾರ ಪ್ರಮಾಣದ ಬಾಳೆ ತೋಟ ಮಳೆಯಿಂದ ನಾಶವಾಗಿದೆ. 3 ಎಕರೆಗೂ ಹೆಚ್ಚು ಬೆಳೆದು ನಿಂತಿದ್ದ 12 ಲಕ್ಷಗಳಿಗಿಂತಲೂ ಹೆಚ್ಚು ಬೆಲೆ ಬಾಳುವ ಬಾಳೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ.