ಕೊಪ್ಪಳ(ಏ.09): ಜಿಲ್ಲೆಯಲ್ಲಿ ಕೋವಿಡ್‌-19 ವೈರಾಣು ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದೇಶ ಜಾರಿಯಲ್ಲಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್‌-19 ಆಸ್ಪತ್ರೆಯೆಂದು ಘೋಷಿಸಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಿರುವ ಕಾರಣ ಕೊಪ್ಪಳ ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆಯನ್ನು ಪರಿವರ್ತಿತ ಜಿಲ್ಲಾ ಆಸ್ಪತ್ರೆಯೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿನ ಒಳರೋಗಿಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ. ಆದ್ದರಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ಆಯಾ ತಾಲೂಕು ಆಸ್ಪತ್ರೆಯಲ್ಲಿ ಮತ್ತು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಯಾ ತಾಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿಫಾರಸ್ಸು ಮಾಡಿದ ಪ್ರಕರಣಗಳು ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯ ಒಪಿಡಿ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊಪ್ಪಳ ಗವಿಸಿದ್ಧೇಶ್ವರ ಆರ್ಯುವೇದ ಆಸ್ಪತ್ರೆಯನ್ನು ಪರಿವರ್ತಿತ ಜಿಲ್ಲಾ ಆಸ್ಪತ್ರೆಯೆಂದು ಗುರುತಿಸಲಾಗಿದೆ.

ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಸದಸ್ಯರ ವಿಕೃತಿ!

ಈ ಕುರಿತು ತಪಾಸಣೆ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳು, ನೋಡಲ್‌ ವೈದ್ಯಾಧಿಕಾರಿಯನ್ನು ಮತ್ತು ಸರ್ಕಾರಿ ವೈದ್ಯರನ್ನು ಹಾಗೂ ಸರದಿ ಪ್ರಕಾರ ಪ್ರಾಥಮಿಕ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಆಸ್ಪತ್ರೆಗೆ ವಿರೂಪಾಕ್ಷಪ್ಪ ಎಸ್‌. ಮಾದಿನೂರು (9449843261) ಹಾಗೂ ಸುನೀಲ್‌ಕುಮಾರ್‌ ದೇಸಾಯಿ (9448777225) ಅವರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಸಾರ್ವಜನಿಕರು ಗವಿಸಿದ್ದೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿ ನಿಯೋಜಿತ ವೈದ್ಯಾಧಿಕಾರಿಗಳ ಶಿಫಾರಸ್ಸಿನನ್ವಯ ಕೊಪ್ಪಳ ನಗರದಲ್ಲಿ ಗುರುತಿಸಲಾದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

ಮತ್ತೆ ಮೂವರು:

ಗದಗ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಬಂದಿರುವ ವ್ಯಕ್ತಿಯ ಸಂಪರ್ಕ ಇರುವ ಓರ್ವರು ಕೊಪ್ಪಳದಲ್ಲಿದ್ದಾರೆ. ಹೀಗಾಗಿ, ಇವರು ಮತ್ತು ಇವರ ಕುಟುಂಬದವರು ಸೇರಿ ಮೂವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ ಇವರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸ್ವಯಂ ಪ್ರೇರಿತವಾಗಿಯೇ ಬಂದು, ನಾವು ಅವರ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿರುವುದರಿಂದ ಅವರನ್ನು ನಗರದ ವಿಜ್ಞಾನ ಭವನದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ, ಕೊಪ್ಪಳ ಜಿಲ್ಲೆಗೂ ಗದಗ ರೋಗಿ ನಂಟು ಇದ್ದು, ವರದಿ ಬರುವವರೆಗೂ ಆತಂಕ ಎದುರಾಗಿದೆ.

ರೈತರ ಸಹಾಯವಾಣಿ

ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳು ಕಟಾವಿಗೆ ಬಂದಿದ್ದು, ಲಾಕ್‌ಡೌನ್‌ ಕಾರಣದಿಂದ ಅವುಗಳ ಮಾರುಕಟ್ಟೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ ಪ್ರಾರಂಭಿಸಿದ್ದು, ಈ ಸಹಾಯವಾಣಿಗೆ ಕರೆ ಮಾಡಲು ಜಿಲ್ಲೆಯ ಎಲ್ಲಾ ರೈತರಲ್ಲಿ ಕೋರಲಾಗಿದೆ. ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಕೊಪ್ಪಳ- 9448999237, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಕೊಪ್ಪಳ- 8861294104, ಗಂಗಾವತಿ- 9743518608, ಕುಷ್ಟಗಿ-8310291867, ಯಲಬುರ್ಗಾ- 9945644338 ಇವರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.