ಭಟ್ಕಳ(ಏ.01): ಭಟ್ಕಳದಲ್ಲಿ ಮಹಾಮಾರಿ ಕೊರೋನಾ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದ್ದು, ಜನತೆ ಲಾಕ್‌ಡೌನ್‌ ನಿರ್ಲಕ್ಷಿಸಿ ಮನೆಯಿಂದ ಹೊರ ಬಂದಲ್ಲಿ ಮತ್ತಷ್ಟು ಅಪಾಯ ಖಚಿತದ ಜತೆಗೆ ಭಟ್ಕಳಿಗರು ವೈರಸ್‌ ತಡೆಗಟ್ಟಲು ಮತ್ತಷ್ಟು ದಿನ ಲಾಕ್‌ಡೌನ್‌ಗೆ ಒಳಗಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಭಟ್ಕಳದಲ್ಲಿ ಕೊರೋನಾ ಹೆಮ್ಮಾರಿ ಹೊಡೆದೋಡಿಸಲು ಮನೆಯಲ್ಲೇ ಇದ್ದು, ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲಿಸುವುದೇ ಈಗಿರುವ ಏಕೈಕ ಪರಿಹಾರವಾಗಿದೆ. ಕೊರೋನಾ ಕುರಿತು ಭಟ್ಕಳದ ಪರಿಸ್ಥಿತಿ ಅರಿತ ಸರಕಾರ ಮುಂಜಾಗ್ರತಾ ಕ್ರಮವಾಗಿ ಹೆಲ್ತ್‌ ಎಮೆರ್ಜೆನ್ಸಿ ಘೋಷಣೆ ಮಾಡಿದೆ. ಜತೆಗೆ ಕೆಲವು ಪ್ರದೇಶಗಳ ಮೇಲೆ ತೀವ್ರ ನಿಗಾ ಇಟ್ಟಿದೆ.

ದೇಶವ್ಯಾಪ್ತಿ ಏ. 14ರ ವರೆಗೆ ಲಾಕ್‌ಡೌನ್‌ ಇದ್ದು, ಈಗಾಗಲೇ ಆರು ದಿನ ಕಳೆದು ಮತ್ತೆ ಹದಿನಾಲ್ಕು ದಿನ ಬಾಕಿ ಇದೆ. ಕಟ್ಟುನಿಟ್ಟಾಗಿ ಮನೆಯಿಂದ ಹೊರಬರದೇ ಇದ್ದರೆ ವೈರಸ್‌ ಹರಡುವುದನ್ನು ತಡೆಯಬಹುದಾಗಿದೆ. ಜಿಲ್ಲೆಯ ಭಟ್ಕಳ ಹೊರತು ಪಡಿಸಿ ಯಾವುದೇ ತಾಲೂಕಿನಲ್ಲಿ ಕೋವಿಡ್‌-19 ಸೋಂಕು ಇಲ್ಲಿಯ ವರೆಗೆ ದೃಢಪಟ್ಟಿಲ್ಲ. ಮಂಗಳೂರಿನಲ್ಲಿ ದಾಖಲಾದ ವ್ಯಕ್ತಿಯೂ ಸೇರಿದಂತೆ ಒಟ್ಟು 9 ಕೋವಿಡ್‌-19 ಪ್ರಕರಣ ಇಲ್ಲಿ ಪತ್ತೆಯಾಗಿರುವುದು ಬಹಳ ಆತಂಕಕಾರಿಯೇ ಎನ್ನಬಹುದು. ಮತ್ತಷ್ಟು ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲವರು ಹೋಮ್‌ ಕ್ವಾರಂಟೈನ್‌ನಲ್ಲೂ ಇದ್ದಾರೆ.

ಭಾರತ್‌ ಲಾಕ್‌ಡೌನ್‌: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'

ದಿನದಿಂದ ದಿನಕ್ಕೆ ಇಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇದು ಇಲ್ಲಿಗೆ ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಟ್ಕಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೂ ಕೊರೋನಾ ತಡೆಗಟ್ಟುವುದು ಸವಾಲಾಗಿದೆ. ಹೀಗಾಗಿಯೇ ಭಟ್ಕಳದಲ್ಲಿ ಹೆಲ್ತ್‌ ಎಮೆರ್ಜೆನ್ಸಿ ಘೋಷಣೆ ಮಾಡುವುದರ ಮೂಲಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಭಟ್ಕಳಕ್ಕೆ ಪ್ರತ್ಯೇಕ ನೋಡಲ್‌ ಅಧಿಕಾರಿಯನ್ನೂ ನೇಮಕ ಮಾಡಲಾಗಿದೆ. ವಿದೇಶಗಳಲ್ಲಿ ಆಗಲೇ ಮಾರಣ ಹೋಮ ಆರಂಭಿಸಿದ್ದ ಕೊರೋನಾ ಸೋಂಕಿನ ಕುರಿತು ತಿಳಿದೂ ಜಾಗೃ​ತ​ರಾ​ಗ​ದಿ​ರು​ವು​ದರಿಂದ ಇಂದು ಜಿಲ್ಲೆಯ ಜನತೆ ಬೆಲೆ ತೆರಬೇಕಾಗಿ ಬಂದಿರುವುದಲ್ಲದೇ ಜಿಲ್ಲಾಡಳಿತಕ್ಕೆ ಭಟ್ಕಳವೇ ದೊಡ್ಡ ಸಮಸ್ಯೆಯಾಗಿರುವುದಕ್ಕೆ ಕಾರಣ ಎನ್ನಲಾಗಿದೆ.

ವಿದೇಶದಿಂದ ಬಂದವರು ಹಾಗೂ ಅವರ ಸಂಬಂಧಿಗಳು ಮೊದಲೇ ಜಾಗೃತರಾಗಿದ್ದಲ್ಲಿ ಸೋಂಕು ಇಷ್ಟೊಂದು ಪ್ರಮಾಣದಲ್ಲಿ ಹರಡುತ್ತಿರಲಿಲ್ಲ. ಸೋಂಕಿತರು ವಿದೇಶದಿಂದ ಬಂದು ಮನೆಯಲ್ಲಿರುವುದು, ಸಾರ್ವಜನಿಕ ಸಾರಿಗೆ ಬಳಸಿರುವುದು, ಸಾರ್ವಜನಿಕ ಪ್ರದೇಶಕ್ಕೆ ಭೇಟಿ ಕೊಡುವುದು ಮಾಡಿರುವುದು ಇಂದು ಎಲ್ಲರನ್ನೂ ಆತಂಕಕ್ಕೀಡಾಗುವಂತೆ ಮಾಡಿದೆ.

ಇನ್ನಾದರೂ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ರಕ್ಷಣೆಗೆ ಸರಕಾರದ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಿದೆ. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ತಿರುಗಾಟ ಮಾಡುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಮಾಡಿದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ಭಟ್ಕಳಿಗರು ಕೊರೋನಾ ವೈರಸ್‌ ಕುರಿತು ಅಸಡ್ಡೆ ಮಾಡಿದಲ್ಲಿ ರಾಜ್ಯದಲ್ಲಿ ಲಾಕ್‌ಡೌನ್‌ ಅಂತ್ಯವಾದರೂ ಇಲ್ಲಿ ಮುಂದುವರಿಸುವ ಎಲ್ಲ ಸಾಧ್ಯತೆ ಇದೆ. ಲಾಕ್‌ಡೌನ್‌ನಿಂದ ಸಾಕಷ್ಟುಕಷ್ಟ ಅನುಭವಿಸುತ್ತಿರುವ ಜನತೆಗೆ ಮತ್ತೆ ಲಾಕ್‌ಡೌನ್‌ಗೆ ಒಳಗಾಗಲು ಖಂಡಿತ ಮನಸ್ಸಿಲ್ಲ. ಹೀಗಾಗಿ, ಕೊರೋನಾ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬರುತ್ತಿದೆ.