ಘಮ ಘಮಿಸುವ ಭಟ್ಕಳ ಮಲ್ಲಿಗೆಗೂ ಕೊರೋನಾ ಎಫೆಕ್ಟ್!
ಮಲ್ಲಿಗೆ ಮಾರಾಟವಿಲ್ಲದೇ ಬೆಳೆಗಾರರು ಕಂಗಾಲು: ಅಪಾರ ನಷ್ಟ| ದಿನಂಪ್ರತಿ ಸರಾಸರಿ 1.10 ಲಕ್ಷ ಮೊಳ ಮಲ್ಲಿಗೆ ಮಾರಾಟ| ಕೊರೋನಾ ಕರಿನೆರಳಿನಿಂದ ದಿನಕ್ಕೆ 25 ಲಕ್ಷ ನಷ್ಟ|
ಭಟ್ಕಳ(ಏ.08): ಭಟ್ಕಳದ ಘಮ... ಘಮ... ಸುಹಾಸನೆಯುಕ್ತ ಮಲ್ಲಿಗೆಗೆ ಕೊರೋನಾ ಕರಿನೆರಳು ಬಿದ್ದಿದ್ದು, ಬೆಳೆಗಾರರನ್ನು ಕಂಗಾಲಾಗಿಸಿದೆ. ಕೊರೋನಾ ತಡೆಗೆ ಎಲ್ಲೆಡೆ ಲಾಕ್‌ಡೌನ್ ಆಗಿರುವುದರಿಂದ ಮಲ್ಲಿಗೆಗೆ ಬೇಡಿಕೆ ಮತ್ತು ಮಾರಾಟ ಇಲ್ಲದೇ ಗಿಡದಲ್ಲೇ ದಿನಂಪ್ರತಿ ಲಕ್ಷಾಂತರ ರುಪಾಯಿ ಬೆಳೆ ಹಾನಿಯಾಗಿದೆ.
ಭಟ್ಕಳ ಪಟ್ಟಣದ ಮಣ್ಕುಳಿ ಸೇರಿದಂತೆ ಕೆಲವು ಭಾಗಗಳಲ್ಲಿ, ಜಾಲಿ ಪ.ಪಂ., ತಾಲೂಕಿನ ಮುಟ್ಟಳ್ಳಿ, ಹೆಬಳೆ, ಶಿರಾಲಿ, ಬೇಂಗ್ರೆ, ಕಾಯ್ಕಿಣಿ, ಮಾವಳ್ಳಿ, ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 90ರಿಂದ 100 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯುತ್ತಿದ್ದು, ತಾಲೂಕಿನಲ್ಲಿ ಎಂಟರಿಂದ ಹತ್ತು ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿವೆ. ಈ ಸಲ ಮಲ್ಲಿಗೆ ಬೆಳೆ ಚೆನ್ನಾಗಿದ್ದರೂ ಕಳೆದ ಹದಿನೈದು ದಿನಗಳಿಂದ ಕೊರೋನಾ ಕರಿನೆರಳು ಮಲ್ಲಿಗೆಯ ಮೇಲೂ ಬಿದ್ದಿದ್ದರಿಂದ ಬೆಳೆಗಾರರು ದಿನಂಪ್ರತಿ ಮಲ್ಲಿಗೆ ಕೊಯ್ದು ಅಕ್ಕಪಕ್ಕದ ಮನೆಯವರಿಗೆ, ದೇವರ ಪೂಜೆಗೆ ನೀಡುವಂತಾಗಿದೆ.
ಮಂಗಳೂರಿನ ಮೊದಲ ಕೊರೋನಾ ಸೋಂಕಿತ ಸಂಪೂರ್ಣ ಗುಣಮುಖ..!
ಭಟ್ಕಳದ ಮಲ್ಲಿಗೆ ದಿನಂಪ್ರತಿ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಿಗೂ ರಫ್ತಾಗುತ್ತಿದೆಯೆಂದರೆ ಇದರ ಸುಹಾಸನೆ ಎಷ್ಟಿರಬೇಡ! ದಿನಂಪ್ರತಿ ಸರಾಸರಿ 1.10 ಲಕ್ಷ ಮೊಳ (11 ಸಾವಿರ ಅಟ್ಟೆ) ಮಲ್ಲಿಗೆ ಮಾರಾಟವಾಗುತ್ತಿತ್ತು. ಕೊರೋನಾ ಕರಿನೆರಳಿನಿಂದ ದಿವಸಕ್ಕೆ 25 ಲಕ್ಷ ನಷ್ಟ ಆಗುತ್ತಿದೆ ಎನ್ನಲಾಗಿದೆ. ಇದೀಗ ಮಾರಾಟ ಸ್ಥಗಿತಗೊಂಡಿರುವುದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.
ಭಟ್ಕಳದಲ್ಲಿ ತುಂಡು ಭೂಮಿ ಹೊಂದಿದವರು ಮಲ್ಲಿಗೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಕೊರೋನಾ ಲಾಕ್‌ಡೌನ್‌ನಿಂದಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು. ಮಲ್ಲಿಗೆಗೆ ಬೆಳೆಯುವ ರೈತರಿಗೆ ಬೆಂಬಲ ಬೆಲೆ ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮಲ್ಲಿಗೆ ಬೆಳೆಗಾರ ಸತೀಶಕುಮಾರ ನಾಯ್ಕ ಹೇಳಿದ್ದಾರೆ.