Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಹೂವಿನ ಹೊಲದಲ್ಲಿ ಕುರಿ ಬಿಟ್ಟು ಮೇಯಿಸುತ್ತಿರುವ ರೈತರು!

ಕೊರೋನಾ ಬಿಸಿಗೆ ಬಾಡಿದ ಹೂವು| ಮಾರುಕಟ್ಟೆ ಇಲ್ಲದೇ ಧಾರವಾಡ ಜಿಲ್ಲಾದ್ಯಂತ ಬೆಳೆಯಾಗಿದ್ದ ತರಹೇವಾರಿ ಹೂಗಳು ಹಾಳು| ಹರಿದ ಹೂವನ್ನು ನೆಲಕ್ಕೆ ಚೆಲ್ಲುವ ಸ್ಥಿತಿ| ಬೆಳೆದ ಟನ್‌ಗಟ್ಟಲೇ ಹೂವನ್ನು ಏನು ಮಾಡಬೇಕೆಂದು ತೋಚದೇ ನಾಶ ಮಾಡುತ್ತಿರುವ ರೈತರು| 

Farmers Faces Problems due to Bharat LockDown in Dharwad district
Author
Bengaluru, First Published Apr 4, 2020, 11:24 AM IST

ಬಸವರಾಜ ಹಿರೇಮಠ

ಧಾರವಾಡ(ಏ.04): ಲಾಕ್‌ಡೌನ್‌ ಪರಿಣಾಮ ಇಡೀ ಮಾರುಕಟ್ಟೆ ವ್ಯವಸ್ಥೆಯೇ ತಲ್ಲಣಗೊಂಡಿದ್ದು, ಕೊರೋನಾ ವೈರಸ್‌ನ ಕರಿನೆರಳಿಗೆ ಧಾರವಾಡ ಜಿಲ್ಲಾದ್ಯಂತ ಬೆಳೆಯಲಾದ ಅಪಾರ ಪ್ರಮಾಣದ ಹೂವು ಬಾಡಿ ಹೋಗಿದೆ.
ಬೇಸಿಗೆಯಲ್ಲಿ ಹೂವಿಗೆ ಬಲು ಬೇಡಿಕೆ ಎಂದು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಹೂವು ಬೆಳೆದ ರೈತರು ಇದೀಗ ನಷ್ಟದ ಹಾದಿಯಲ್ಲಿದ್ದಾರೆ. ಮಾರುಕಟ್ಟೆ ಇಲ್ಲದಾಗಿದ್ದು ತಾವು ಬೆಳೆದ ಟನ್‌ಗಟ್ಟಲೇ ಹೂವನ್ನು ಏನು ಮಾಡಬೇಕೆಂದು ತೋಚದೇ ಕೆಲವು ರೈತರು ನಾಶ ಮಾಡುತ್ತಿದ್ದರೆ, ಇನ್ನು ಕೆಲವರು ಹರಿಯದೇ ಹಾಗೆ ಬಿಡುತ್ತಿದ್ದಾರೆ. ಮತ್ತೆ ಕೆಲವರು ಹೂವಿನ ಹೊಲದಲ್ಲಿ ಕುರಿ-ಆಡುಗಳನ್ನು ಬಿಡುತ್ತಿದ್ದಾರೆ.

ಅಸಹಾಯಕ:

ಜಿಲ್ಲೆಯ ಧಾರವಾಡ, ಕಲಘಟಗಿ ಹಾಗೂ ಹುಬ್ಬಳ್ಳಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಅಂದಾಜು 500 ಹೆಕ್ಕೇರ್‌ ಪ್ರದೇಶದಲ್ಲಿ ಗುಲಾಬಿ, ಗಲಾಟೆ, ಸೇವಂತಿಗೆ, ಮಲ್ಲಿಗೆ ಹೂವು ಬೆಳೆಯಲಾಗುತ್ತಿದೆ. ಒಂದು ಹೆಕ್ಟೇರ್‌ಗೆ 2 ಟನ್‌ ಉತ್ಪಾದನೆ ಆಗಲಿದ್ದು, ಒಂದು ಸಾವಿರ ಟನ್‌ ಹೂವು ಮಾರಾಟವಾಗುತ್ತಿಲ್ಲ.

ಕೊರೋನಾ ಕಾಟ: ನೈರುತ್ಯ ರೈಲ್ವೆಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಉತ್ಪಾದನೆ

ಕಳೆದ ಬಾರಿ ಅಪಾರ ಮಳೆ ಬಂದು ಹಾಳಾದೆವು. ಈ ಬಾರಿ ಕೊರೋನಾ ಬಂದು ಮಾರುಕಟ್ಟೆ ಇಲ್ಲದೇ ನಷ್ಟ ಹೊಂದಿದ್ದೇವೆ. ಹರಿದ ಹೂವನ್ನು ನೆಲಕ್ಕೆ ಚೆಲ್ಲುವ ಸ್ಥಿತಿ ಬಂದಿದೆ. ಸರ್ಕಾರ ಹೂ ಬೆಳೆಗಾರರಿಗೆ ಆರ್ಥಿಕ ಸಹಾಯ ಮಾಡಲೇಬೇಕೆಂದು ಮನಗುಂಡಿಯ ಹೂ ಬೆಳೆಗಾರ ಕಲ್ಲಪ್ಪ ಅಂಗಡಿ ಸಂಕಷ್ಟ ಹಂಚಿಕೊಂಡರು.

ತೋಟಗಾರಿಕೆ ಇಲಾಖೆ ವತಿಯಿಂದ ತರಕಾರಿ ಹಾಗೂ ಹಣ್ಣು ಬೆಳೆದ ರೈತರಿಗೆ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದು ಯಶಸ್ವಿಯೂ ಆಗಿದೆ. ಆದರೆ ಅದನ್ನು ರಕ್ಷಿಸಿಟ್ಟು ಮಾರಾಟ ಮಾಡುವಂತೆಯೂ ಇಲ್ಲ. ಹೀಗಾಗಿ ತೋಟಗಾರಿಕೆ ಇಲಾಖೆ ಸಹ ಏನೂ ಮಾಡದ ಸ್ಥಿತಿ ಉಂಟಾಗಿದೆ. ಹೂ ಬೆಳೆಗಾರರಿಗೆ ವಿಶೇಷ ಪ್ಯಾಕೆಜ್‌ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ರಾಮಚಂದ್ರ ಮಡಿವಾಳರ ಅವರು, ಇಲಾಖೆಯಿಂದ ಹಣ್ಣು, ತರಕಾರಿಯನ್ನು ಮಾರಾಟ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಾರುಕಟ್ಟೆಇಲ್ಲದೇ ಹೂವಿನ ಮಾರಾಟ ತುಸು ಕಷ್ಟವಾಗಿದೆ. ಇಷ್ಟಾಗಿಯೂ ಯಾವ ಜಿಲ್ಲೆಯಲ್ಲಿ ಹೂವಿನ ಬೇಡಿಕೆ ಇದೆಯೋ ಅಲ್ಲಿಗೆ ಜಿಲ್ಲೆಯ ಹೂ ಕಳುಹಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios