ವಿಜಯಪುರ(ಮಾ.29): ಕರ್ತವ್ಯದ ಮಧ್ಯೆಯೂ ಅನ್ನವಿಲ್ಲದೆ ಪರದಾಡುತ್ತಿದ್ದ ಕಾರ್ಮಿಕರು ಹಾಗೂ ಮಕ್ಕಳಿಗೆ ಸ್ವಂತ ಖರ್ಚಿನಿಂದ ಬಿಸ್ಕತ್ ತಂದು ನೀಡುವ ಮೂಲಕ ಅಬಕಾರಿ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದ ಘಟನೆ ಇಂದು(ಭಾನುವಾರ) ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಚೆಕ್ ಪೋಸ್ಟ್ ಬಳಿ ನಡೆದಿದೆ. 

ಅಬಕಾರಿ ಇಲಾಖೆ ಸಬ್‌ಇನ್ಸ್‌ಪೆಕ್ಟರ್ ಸದಾಶಿವ ಕೊರ್ತಿ ಅವರೇ ಮಾನವೀಯತೆ ಮೆರೆದ ಅಧಿಕಾರಿಯಾಗಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ ಉತ್ತರ ಪ್ರದೇಶ, ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತೆರಳಬೇಕಿದ್ದ ಜನರನ್ನ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಅವರನ್ನು ತಡೆಹಿಡಿಯಲಾಗಿತ್ತು.

ಕೂಲಿ ಕಾರ್ಮಿಕರನ್ನ ರಾಜಸ್ಥಾನಕ್ಕೆ ಕಳುಹಿಸಲು ವಿಜಯಪುರ ಜಿಲ್ಲಾಡಳಿತ ನಿರ್ಧಾರ

ಸುಮಾರು ಎರಡು ಸಾವಿರ ಕಾರ್ಮಿಕರನ್ನು ತಡೆ ಹಿಡಿಯಲಾಗಿದೆ. ಬೆಂಗಳೂರಿನಿಂದ ಲಾರಿಗಳಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಕಾರ್ಮಿಕರು ತೆರಳುತ್ತಿದ್ದರು. ಕೊರೋನಾ ಎಫೆಕ್ಟ್‌ನಿಂದ ಜಿಲ್ಲಾಡಳಿತ ಅವರನ್ನು ತಡೆ ಹಿಡಿದಿತ್ತು. ಈ ವೇಳೆ ಕಾರ್ಮಿಕರು ಹಾಗೂ ಮಕ್ಕಳಿಗೆ ತಿನ್ನಲು ಏನು ಸಿಗದೆ ಪರದಾಡುತ್ತಿದ್ದರು. ಇದನ್ನು ಗಮನಿಸಿದ ಅಧಿಕಾರಿ ಸದಾಶಿವ ಕೊರ್ತಿ ಅವರಿಗೆಲ್ಲ 2 ಸಾವಿರ ರು. ಬಿಸ್ಕತ್ ಪ್ಯಾಕೆಟ್ ತರಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.