ಬೆಂಗಳೂರು(ಏ.03): ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 21 ದಿನಗಳ ಲಾಕ್‌ಡೌನ್‌ನಿಂದಾಗಿ ಅಗಾಧ ಪರಿಣಾಮವಾಗಿದೆ. ಈ ಕ್ರಮವು ಕೊರೋನಾ ವೈರಸ್‌ನಿಂದ ಆಗುತ್ತಿದ್ದ ಸಾವಿನ ಪ್ರಮಾಣವನ್ನು ಕನಿಷ್ಠ ಶೇ.50ರಷ್ಟು ತಗ್ಗಿಸಲಿದೆ ಎಂದು ದೇಶದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ತಿಳಿಸಿದ್ದಾರೆ.

ಇದೇ ವೇಳೆ, 21 ದಿನಗಳ ಲಾಕ್‌ಡೌನ್‌ ಅವಧಿ ಮುಗಿದ ಬಳಿಕ ಅದನ್ನು ವಿಸ್ತರಿಸಬೇಕಾದ ಅಗತ್ಯವಿಲ್ಲ. ಅದರಿಂದ ದೊಡ್ಡ ಪರಿಣಾಮವೂ ಆಗುವುದಿಲ್ಲ. ಎಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಿವೆಯೋ ಅಲ್ಲಿ ಮಾತ್ರ ಲಾಕ್‌ಡೌನ್‌ ಮಾಡಿದರೆ ಸಾಕಾಗುತ್ತದೆ. ಇಡೀ ದೇಶಾದ್ಯಂತ ಲಾಕ್‌ಡೌನ್‌ ಮುಂದುವರೆಸಬೇಕಾದ ಅಗತ್ಯವಿಲ್ಲ. ಜೊತೆಗೆ ಕೇವಲ ಲಾಕ್‌ಡೌನ್‌ನಿಂದ ಮಾತ್ರವೇ ಪೂರ್ಣ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಇದರ ಜತೆಗೆ ಸಾಧ್ಯವಿರುವಷ್ಟು ಹೆಚ್ಚೆಚ್ಚು ವ್ಯಕ್ತಿಗಳಿಗೆ ಕೊರೋನಾ ಸೋಂಕು ಪರೀಕ್ಷೆಯನ್ನು ನಡೆಸಬೇಕಾಗಿದೆ ಎಂದು ನಾರಾಯಣ ಹೆಲ್ತ್‌ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಶೆಟ್ಟಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

21 ದಿನದ ಲಾಕ್‌ಔಟ್‌ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?

ದೇಶದಲ್ಲಿ ಮುಂದಿನ ಎರಡರಿಂದ ಮೂರು ವಾರಗಳ ಕಾಲ ಕೊರೋನಾ ಸೋಂಕು ದೃಢಪಡುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ಈಗಿನ ಮಟ್ಟನಿರ್ವಹಿಸಬಹುದಾದ ಪ್ರಮಾಣದಲ್ಲಿದೆ. ದೇಶದಲ್ಲಿ ಕೊರೋನಾವನ್ನು ನಿರ್ವಹಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.