ಬೆಳಗಾವಿ[ಮಾ.23]: ಕೊರೋನಾ ಪಿಡುಗನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ನಮ್ಮ ಸಾರಿಗೆ  ಸಂಸ್ಥೆಗಳ ಬಸ್ಸುಗಳ ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.  ಆದರೆ ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ  ಸವದಿ ಎಚ್ಚರಿಕೆ ನೀಡಿದ್ದಾರೆ.

ಇಂದು[ಸೋಮವಾರ] ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಪ್ರಯಾಣಿಕರಿಂದ ಸುಲಿಗೆ ಮಾಡಿ ಕೆಲವೆಡೆ ಖಾಸಗಿ ವಾಹನಗಳು, ಖಾಸಗಿ ಬಸ್ಸುಗಳ ಮತ್ತು ಆಟೋ ರಿಕ್ಷಾಗಳ  ಮಾಲೀಕರು ಪ್ರಯಾಣಿಕರನ್ನು ಶೋಷಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ.ಅಷ್ಟೇ ಅಲ್ಲ ಕೆಲವು ಜಿಲ್ಲೆಗಳನ್ನು ಈಗಾಗಲೇ ಲಾಕ್ಔಟ್ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಇಂತಹ ಕಡೆಗಳಿಗೆ ಅಂತರ್ ಜಿಲ್ಲಾ ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಮಾಡಿ ಅಂದ್ರೆ ಡಬಲ್ ರೇಟ್ ಮಾಡಿ ಸುಲಿಗೆಗಿಳಿದ ಖಾಸಗಿ ಬಸ್‌ಗಳು!

ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯನ್ನು ಗಮನಿಸಿ ಕೈಗೊಳ್ಳಲಾದ ಸರ್ಕಾರದ ಈ ನಿರ್ಧಾರವನ್ನು ಯಾರೂ  ಉಲ್ಲಂಘಿಸಬಾರದು.ಈಗಾಗಲೇ ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕೆಂದು ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ಧಾರೆ.