ಬೆಂಗಳೂರು, (ಏ.01): ಕೊರೋನಾ ಲಾಕ್‌ಡೌನ್ ಮಧ್ಯೆಯೇ  ದೆಹಲಿಯ ಜಮಾತ್ ಮಸೀದಿ ಕಾರ್ಯಕ್ರಮದಲ್ಲಿ ರಾಜ್ಯದ ನೂರಾರು ಜನರು ಪಾಲ್ಗೊಂಡಿರುವುದು ಆತಂಕ ಮೂಡಿಸಿದೆ.

ಅಲ್ಲದೇ ರಾಜ್ಯದಲ್ಲಿ ಕೆಲ ಮಸೀದಿಗಳು ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಕರ್ನಾಟಕ ರಾಜ್ಯ ವಕ್ಫ್ ಮಸೀದಿಯ ಮುಖ್ಯಸ್ಥರಿಗೆ ಮತ್ತೆ ಸೂಚನೆಯೊಂದನ್ನು ನೀಡಿದೆ.

ದೆಹಲಿ ಮಸೀದಿ ಧರ್ಮಸಭೆಯಲ್ಲಿ ರಾಜ್ಯದ 300 ಮಂದಿ ಭಾಗಿ; 40 ಮಂದಿಗೆ ಹೋಂ ಕ್ವಾರಂಟೈನ್

ಶುಕ್ರವಾರ ಪ್ರಾರ್ಥನೆ ಸಹಿತ ಸಾಮೂಹಿಕ ಪ್ರಾರ್ಥನೆಗಳನ್ನು ರಾಜ್ಯದ ಮಸೀದಿಗಳಲ್ಲಿ ಸಾರ್ವಜನಿಕರಿಗೆ ನಿರ್ಭಂದಿಸಲಾಗಿರುತ್ತದೆ. ಇದನ್ನು ತಪ್ಪದೇ ಪಾಲಿಸಲು ಕರ್ನಾಟಕ ವಕ್ಫ್ ಮಂಡಳಿಗಳಿಗೆ ಹೈಕೋರ್ಟ್ ಸೂಚಿಸಿದೆ. 

ಅದರಂತೆ ರಾಜ್ಯದ ದರ್ಗಾ ಅಥವಾ ಮಸೀದಿಗಳ ವ್ಯವಸ್ಥಾಪನಾ ಸಮಿತಿಗಳು ನಿಯಮ ಪಾಲಿಸಬೇಕೆಂದು ಪುನರ್ ಉಚ್ಛರಿಸುವುದು ಅವಶ್ಯವಾಗುದೆ. ಆದ್ದರಿಂದ ಶುಕ್ರವಾರದ ಮಧ್ಯಾಹ್ನ ನಮಾಜ್ ಸಹಿತ ಪ್ರತಿದಿನದ ಐದು ಹೊತ್ತಿನ  ಪ್ರಾರ್ಥನೆಯನ್ನು ದಿನಾಂಕ 14/4/2020ರ ವರೆಗೆ ನಿಷೇಧಿಸಲಾಗಿದೆ.

ರಾಜ್ಯದ ಎಲ್ಲಾ ವಕ್ಫ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಗಳು ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಈ ಆದೇಶವನ್ನು ಚಾಚು ತಪ್ಪದೆ ಪಾಲಿಸುವಂತೆ ತಿಳಿಸಲಾಗಿದೆ

ಅಷ್ಟೇ ಅಲ್ಲದೇ ಕೊರೋನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಇನ್ನು ತಪ್ಪದೇ ಪ್ರತಿದಿನ 3 ಭಾಷೆಗಳಲ್ಲಿ4 ಬಾರಿ ಮಸೀದಿ ಧ್ವನಿವರ್ಧಕದ ಮೂಲಕ ಸಾರಲು ಆದೇಶಿಸಲಾಗಿದೆ.

ಸಚಿವರ ಎಚ್ಚರಿಕೆ ಸಂದೇಶ
ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ 14/4/2020ರ ವರೆಗೆ ನಮಾಜ್ ನಿಷೇಧಿಸಲಾಗಿದೆ. ಪ್ರತಿದಿನದ 5 ಹೊತ್ತಿನ ನಮಾಜನ್ನು ಯಾವುದೇ ಕಾರಣಕ್ಕೆ ಮಸೀದಿಗೆ ತೆರಳಿ ಮಾಡಬಾರದು.  ಮುಂದಿನ ಆದೇಶ ಬರುವವರೆಗೆ ತಮ್ಮ ತಮ್ಮ ಮನೆಗಳಲ್ಲಿ ನಾಮಜ್ ಮಾಡಲು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ನೆರೆಹೊರೆಯವರೊಂದಿಗೆ ಸೇರಿ ನಮಾಜ್ ಮಾಡಲು ಅವಕಾಶ ಇರುವುದಿಲ್ಲ.ಆದೇಶವನ್ನು ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್ ಮಾಡುವುದು ಕಂಡುಬಂದಲ್ಲಿ ಆಯೋಜಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ವಕ್ಫ್ ಸಚಿವ ಪ್ರಭು ಚೌಹಾಣ್ ಎಚ್ಚರಿಕೆ ಕೊಟ್ಟಿದ್ದಾರೆ.