ಕೊರೋನಾ ವ್ಯಾಧಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇದು ಮನುಷ್ಯ ಜನಾಂಗಕ್ಕೆ ಮಾರಕವಾದ ರೋಗವಾಗಿದೆ. ಈ ಹಿಂದೆ ಪ್ರಪಂಚದಲ್ಲಿ ಪ್ಲೇಗ್‌ ಸೇರಿದಂತೆ ಅನೇಕ ವ್ಯಾಧಿಗಳು ಸಾವಿರಾರು ಜನರನ್ನು ಬಲಿಪಡೆದಿವೆ.

ಪ್ಲೇಗ್‌ ಬಂದಾಗ ಪರ್ಯಾಯ ಔಷಧಿ, ವೈದ್ಯಕೀಯ ಸೌಲಭ್ಯ ಮತ್ತು ಮಾಹಿತಿ ಇರಲಿಲ್ಲ. ರೋಗದಿಂದ ಎಷ್ಟುಮಂದಿ ಸತ್ತರು, ಎಷ್ಟುಮಂದಿ ನರಳಿದರು ಎಂಬ ಪೂರ್ಣ ಮಾಹಿತಿಯೂ ಇರಲಿಲ್ಲ. ಇವತ್ತು ಮಾಧ್ಯಮಗಳ ಸಹಾಯದಿಂದ ವಿಶ್ವದಲ್ಲಿ ಜಾಗೃತಿ ಉಂಟಾಗಿದೆ.

ಕಲಿಯುಗ ಕೆಟ್ಟದು ಎನ್ನುತ್ತಾರೆ. ಆದರೆ ಕಲಿಯುಗದಲ್ಲಿ ಮಾತ್ರ ಕಾಯಿಲೆಗಳು ಬಂದಾಗ, ವಿಪತ್ತುಗಳು ಬಂದಾಗ ರಕ್ಷಣೆಗೆ ಅವಕಾಶವಿದೆ. ಕೊರೋನಾ ವ್ಯಾಧಿ ಕೂಡ ಇದೇ ರೀತಿಯದ್ದು. ಎಲ್ಲಿ ಹುಟ್ಟಿದ್ದು, ಎಲ್ಲಿ ಬೆಳೆಯಿತು ಎಂಬುದಕ್ಕಿಂತ ನಮ್ಮ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ.

ಭಾರತ್‌ ಲಾಕ್‌ಡೌನ್‌: 'ನಿರ್ಗತಿಕರಿಗೆ ಆಹಾರ ವಿತ​ರಿ​ಸುವುದಕ್ಕೆ ಅನು​ಮ​ತಿ ಕಡ್ಡಾಯ'

ಕೊರೋನಾ ಕಾಯಿಲೆಯಿಂದ ಸಾವು ಬರುವುದು ಎಂಬುದು ನಿಶ್ಚಯ. ಆದರೆ ಅದಕ್ಕೆ ಬೇಕಾದ ಔಷಧ ಕಂಡುಹಿಡಿಯಲು ಯಾರಿಗೂ ಸಾಧ್ಯವಾಗಿಲ್ಲ. ಅದಕ್ಕಾಗಿ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸೋಣ. ಅದಕ್ಕೂ ಮುಖ್ಯವಾದುದು ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಳ್ಳೆಯ ಸಂದೇಶದ ಜತೆಗೆ ಕಟುವಾದ ತೀರ್ಮಾನ ತೆಗೆದುಕೊಂಡಿದ್ದಾರೆ.

ಒಂದು ದೇಶವನ್ನು ಲಾಕ್‌ಡೌನ್‌ ಮಾಡುವುದು ಎಂದರೆ ಪ್ರಧಾನಿಯಾದವರಿಗೆ ಅದಕ್ಕಿಂತ ದೊಡ್ಡ ಸವಾಲು ಇರಲಿಕ್ಕಿಲ್ಲ. ಅವರು ಸವಾಲನ್ನು ಎದುರಿಸಿ ಎಲ್ಲರೂ ಕಡ್ಡಾಯವಾಗಿ ಲಾಕ್‌ಡೌನ್‌ ಮಾಡಿಕೊಂಡು ಮನೆಯಲ್ಲೇ ಉಳಿಯಿರಿ ಎಂಬ ಸಂದೇಶ ಕೊಟ್ಟಿದ್ದಾರೆ.

ಶೇ.99 ಮಂದಿ ಇದನ್ನು ಒಪ್ಪಿಕೊಂಡು ಮನೆಯಲ್ಲೇ ಉಳಿದಿದ್ದಾರೆ. ಶೇ.1 ರಷ್ಟುಅವಿವೇಕಿಗಳನ್ನು ಬದಿಗೊತ್ತಿ ಆಲೋಚಿಸಿದರೆ ಶೇ.99 ಮಂದಿ ವಿಧೇಯರಾಗಿ, ಸತ್ಪ್ರಜೆಗಳಾಗಿ ಸತ್‌ ಸಂಪ್ರದಾಯವನ್ನು ಮೆರೆದಿದ್ದಾರೆ ಎಂಬುದೇ ಹರ್ಷಕರ.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಎಷ್ಟುಮಂದಿ ಭೇಟಿ ನೀಡುತ್ತಾರೆ ನಿಮಗೆಲ್ಲ ತಿಳಿದಿದೆ. ಕಳೆದ ಒಂದು ವಾರದಿಂದ ಒಬ್ಬ ವ್ಯಕ್ತಿಯೂ ದೇವರ ದರ್ಶನಕ್ಕೆ ಬರಲಿಲ್ಲ. ಬರಲಿಲ್ಲ ಎಂಬುದು ಮುಖ್ಯವಲ್ಲ, ಆದರೆ ಈ ಶಿಸ್ತನ್ನು ಯಾರೆಲ್ಲ ಪಾಲಿಸಿದ್ದೀರಿ ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ.

ದೇಶದ ಮೊದಲ ಕೊರೋನಾ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದ ಗರ್ಭವತಿ!

ಈ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಬರಬೇಡಿ. ನೀವೆಲ್ಲರೂ ಮನೆಯೊಳಗಿರಿ. ನಿಮ್ಮ ಆಹಾರ, ವಿಚಾರ, ವ್ಯವಹಾರವನ್ನು ಮನೆಯಲ್ಲೇ ನಿಭಾಯಿಸಿ. ಕುಟುಂಬದೊಂದಿಗೆ ಸಮಯ ಕಳೆಯಲು ಇದೊಂದು ಉತ್ತಮ ಅವಕಾಶ. ಈ ಸಂದರ್ಭ ಮನೆಯಲ್ಲಿ ಮಕ್ಕಳನ್ನು ಹತೋಟಿಗೆ ತರುವುದು ಕಷ್ಟ. ಆದರೆ ಈ ಸಮಯದಲ್ಲಿ ಮಕ್ಕಳಿಗೆ ಪ್ರಜ್ಞೆ ಮೂಡಿಸಿ, ಜಾಗೃತಿ ಮೂಡಿಸಿ. ಈ ಸೋಂಕು ರೋಗದಿಂದ ಬಚಾವಾದರೆ ಮುಂದಿನ ದಿನಗಳಲ್ಲಿ ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬಹುದು.

ಎಲ್ಲರೂ ಸಂಯಮ ಪಾಲಿಸಿ ಎಚ್ಚರಿಕೆಯಿಂದ ಇದ್ದು, ಸಾರ್ವಜನಿಕ ಪ್ರದೇಶದಿಂದ ಹಾಲು, ಅಗತ್ಯ ವಸ್ತು ಖರೀದಿಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ನೀವು ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಸಂದರ್ಭ ಯೋಗ ಅಭ್ಯಾಸ ರೂಢಿಸಿಕೊಳ್ಳಿ. ನಾನೂ ದಿನಾ ಯೋಗಾಸನ ಮಾಡುತ್ತೇನೆ. ಹಿಂದೂಗಳು ಸಾಮಾನ್ಯವಾಗಿ ದೇವರ ಪೂಜೆ ಮಾಡುತ್ತಾರೆ. ಆದರೆ, ಹಿಂದಿನ ಕಾಲದಂತೆ ನಿಯಮದಲ್ಲಿ ಮಾಡುವುದಿಲ್ಲ. ಗಂಡಸರು ಬೆಳಗ್ಗೆ 6ರಿಂದ 11 ಸೂರ್ಯ ನಮಸ್ಕಾರ ಅಥವಾ ದೀರ್ಘ ದಂಡ ನಮಸ್ಕಾರ ಮಾಡಬೇಕು. ಮಹಿಳೆಯರು ಅಡ್ಡಬಿದ್ದು ನಮಸ್ಕಾರ ಮಾಡುವುದರಿಂದ ಉಸಿರಾಟ ತೊಂದರೆ, ರಕ್ತ ಸಂಚಾರ ಸಮಸ್ಯೆ ನಿವಾರಣೆಯಾಗಿ ದೇಹ ಸಮತೋಲ ಕಾಯ್ದುಕೊಳ್ಳುತ್ತದೆ. ಹೋಟೆಲ್‌ ವ್ಯವಸ್ಥೆ ಇಲ್ಲವಾದ್ದರಿಂದ ಮನೆ ಆಹಾರ ಅತಿಯಾದ ಬಳಕೆ ಮಾಡದೆ ಮಿತವಾದ ಆಹಾರ ಸೇವನೆ ಇರಲಿ.

ಖಂಡಿತವಾಗಿಯೂ ಕೊರೋನಾ ಸೋಂಕು ನಿವಾರಣೆಯಾಗಲಿದೆ. ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಲೋಕಕಲ್ಯಾಣಕ್ಕಾಗಿ ನಿತ್ಯವೂ ಪೂಜೆ, ಹೋಮ ಹವನ, ಅರ್ಚನೆ ಮಾಡುತ್ತಿದ್ದೇವೆ. ಇವೆಲ್ಲವೂ ನಿಮ್ಮೆಲ್ಲರ ಹಿತಕ್ಕಾಗಿ. ಎಲ್ಲರೂ ಸುಖವಾಗಿರಬೇಕು ಎಂಬ ಭಾವನೆಯೇ ದೊಡ್ಡ ಪುಣ್ಯ ನೀಡುತ್ತದೆ. ಸೋಂಕನ್ನು ದೇಶದಿಂದ ಹೊರದೂಡಲು ನಾವೆಲ್ಲರೂ ಕಟಿಬದ್ಧರಾಗೋಣ. ಮುಂದಿನ ಜನಾಂಗಕ್ಕೆ ನಾವು ರಕ್ಷಣೆ ನೀಡೋಣ.

ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ