ಮಂಗಳೂರು, (ಏ.05): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಪ್ರಥಮ ಕೊರೋನಾ ವೈರಸ್ ಸೋಂಕಿತ ಭಟ್ಕಳದ ಯುವಕ ಸಂಪೂರ್ಣ ಚೇತರಿಸಿದ್ದು, ಎ.6ರಂದು ಆತನನ್ನು ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.19ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದಿದ್ದ ಭಟ್ಕಳದ ಯುವಕನಿಗೆ ಮಾ.22ರಂದು ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು.

ಕೇರಳದ ಈ ನರ್ಸ್ ಕೊರೋನಾವನ್ನೇ ಸೋಲಿಸಿದ್ದು ಹೇಗೆ? 

ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ 14 ದಿನಗಳ ನಿಗಾ ಅವಧಿ ಪೂರೈಸಿದ್ದು, ಆತನ ಗಂಟಲಿನ ದ್ರವದ ಮಾದರಿಯನ್ನು ಎ.2 ಮತ್ತು 3ರಂದು ಮತ್ತೆ 2 ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

 ಇದೀಗ ಆತನ ದ್ರವದ ಮಾದರಿಯ ವರದಿಯು ನೆಗೆಟಿವ್ ಬಂದಿದೆ. ಹಾಗಾಗಿ ಆತನನ್ನು ಎ.6ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈವರೆಗೆ ರಾಜ್ಯದಲ್ಲಿ ಒಟ್ಟು 151 ಕೊರೋನಾ ಕೇಸ್ ದೃಢಪಟ್ಟಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು 12 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕರ್ನಾಟಕ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದೆ.

ದಕ್ಷಿಣ ಕನ್ನಡದ ಫಸ್ಟ್ ಕೇಸ್ ಗುಣಮುಖವಾಗಿರುವುದು ಖುಷಿ ಸಂಗತಿ. ಆದ್ರೆ, ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ. ಲಾಕ್‌ಡೌನ್ ಪಾಲಿಸುವುದರ ಜತೆಗೆ ಸಮಾಜಿಕ ಅಂತರ ಕಾಪಾಡಿಕೊಂಡ್ರೆ ಮಾತ್ರ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು.

ಹೀಗಾಗಿ ಎಲ್ಲರೂ ಮನೆಯಲ್ಲಿ ಇರಿ. ಕೊರೋನಾ ಮಾಹಾಮಾರಿಯನ್ನು ಒದ್ದು ಓಡಿಸಿ.