ಕಾವೇರಿ ಎಸ್‌.ಎಸ್‌.

ಬೆಂಗ​ಳೂ​ರು(ಮಾ.28): ಲಾಕ್‌ಡೌನ್‌ಗೆ ಆದೇಶಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಕರ್ನಾಟಕ ಸೆಕ್ಸ್ ವರ್ಕರ್ಸ್‌ ಯೂನಿಯನ್‌ (ಕೆಎಸ್‌ಡಬ್ಲ್ಯುಯು) ಮತ್ತು ಉತ್ತರ ಕರ್ನಾಟಕ ಮಹಿಳಾ ಒಕ್ಕೂಟ (ಯುಕೆಎಂಒ) ಸಹಯೋಗದಲ್ಲಿ ಸರ್ಕಾರೇತರ ಸಂಸ್ಥೆಯಾದ ‘ಸಂಗಮ’ ಈ ಅಭಿಯಾನ ರೂಪಿಸಿದೆ.

ಪ್ರಾಥಮಿಕ ಹಂತದಲ್ಲಿ ಬೆಂಗಳೂರು ಗ್ರಾಮೀಣ, ಹಾಸನ, ಬೀದರ್‌, ಯಾದಗಿರಿ, ರಾಮನಗರ, ಹಾವೇರಿ, ಗದಗ, ರಾಯಚೂರು, ಕೊಪ್ಪಳ, ಕೋಲಾರ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಭಾಗದಲ್ಲಿ ನೆರವಿನ ಹಸ್ತ ಚಾಚಲು ಸಂಸ್ಥೆ ಮುಂದಾಗಿದೆ.

ಸದ್ಯ ಲೇಖಕಿ ಅರುಂಧತಿ ರಾಯ್ ಈ ಅಭಿಯಾನಕ್ಕೆ ಒಂದು ಲಕ್ಷ ಆರ್ಥಿಕ ನೆರವು ನೀಡಿದ್ದು, ಈವರೆಗೆ ಅಂದಾಜು ಐದು ಲಕ್ಷ ರು. ದಾನಿಗಳಿಂದ ಸಂಗ್ರಹವಾಗಿದೆ.

ಅಭಿಯಾನದಲ್ಲಿ 10 ಜಿಲ್ಲೆಗಳ 350 ಲೈಂಗಿಕ ಕಾರ್ಯಕರ್ತರು ಮತ್ತು 150 ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ 2000 ರು. ನೀಡಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ನಗದು ರೂಪದಲ್ಲಿ ಹಾಗೂ ಇನ್ನುಳಿದ ಹಣದಲ್ಲಿ ಮನೆಗೆ ಅಗತ್ಯವಾದ ಪದಾರ್ಥಗಳನ್ನು ಪಡಿತರ ರೂಪದಲ್ಲಿ ನೀಡಲಾಗುವುದು. ಜತೆಗೆ ಮಕ್ಕಳನ್ನು ಹೊಂದಿರುವವರು, ಹಿರಿಯ ನಾಗರಿಕರು ಮತ್ತು ಕೊರೋನ ವೈರಸ್‌ ಬಂದಾಗ ಹೆಚ್ಚಿನ ಅಪಾಯದಲ್ಲಿರುವವರಿಗೂ ಸಹಾಯ ಮಾಡಲಾಗುತ್ತಿದೆ ಎಂದು ‘ಸಂಗಮ’ ಹೇಳಿದೆ.

ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಈ ಅಭಿಯಾನದ ಮೂಲಕ 10 ಜಿಲ್ಲೆಗಳಲ್ಲಿ ಕಡುಬಡತನ, ಆರ್ಥಿಕವಾಗಿ ಕಷ್ಟದಲ್ಲಿರುವ ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲಾಗುತ್ತಿದೆ. ಅವರ ಜೀವನೋಪಾಯವೂ ಭಿಕ್ಷಾಟನೆಯ ಮೇಲೆ ಅವಲಂಬಿತವಾಗಿದೆ. ಮುಂದಿನ ದಿನಗಳಲ್ಲಿ ಬದುಕು ಸಾಗಿಸಲು ದಾರಿ ಕಾಣದಂತಹ ಸಂದಿಗ್ಧತೆಗೆ ಈ ಸಮುದಾಯ ಸಿಲುಕಲಿದೆ. ಇವರೂ ನಮ್ಮ ಸಮಾಜದ ಭಾಗವಾಗಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ನೆರವು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎನ್ನುತ್ತಾರೆ ಅಭಿಯಾನದ ಸದಸ್ಯರು.

ಪ್ರತಿ ಜಿಲ್ಲೆಯಲ್ಲಿ 2000 ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಸದ್ಯಕ್ಕೆ ತುಂಬಾ ಸಮಸ್ಯೆ ಇರುವವರಿಗೆ ಬೆಂಬಲಿಸುತ್ತಿದ್ದೇವೆ. ಬಹುತೇಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಭಿಕ್ಷಾಟನೆ ನಂಬಿಕೊಂಡವರಿಗೆ ಇಂದು ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ. ಲೈಂಗಿಕ ಕಾರ್ಮಿಕರು ಸಹ ಕಾರ್ಮಿಕರೇ. ಸರ್ಕಾರ ಈ ಸಮುದಾಯದ ನೆರವಿಗೆ ಧಾವಿಸಬೇಕು ಎಂದು ಸಂಗಮ ಸಂಸ್ಥೆಯ ಸದಸ್ಯರಾದ ರಾಜೇಶ್‌ ಮನವಿ ಮಾಡಿದರು.