ಬೆಂಗಳೂರು(ಮಾ.25): ಕೊರೋನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿಯದ ನಾಗರಿಕರು ಮಂಗಳವಾರ ರಸ್ತೆಗಿಳಿದು ತಿರುಗಾಡಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸೋಮವಾರ ಒಂಬತ್ತು ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡುವ ನಿರ್ಧಾರ ಫಲಕೊಡದ್ದರಿಂದ ಸರ್ಕಾರ ತಕ್ಷಣವೇ ಇಡೀ ರಾಜ್ಯವನ್ನು ಲಾಕ್‌ಡೌನ್‌ ಮಾಡುವ ನಿರ್ಧಾರ ಬಂದಿತ್ತು. ಆದರೆ ಸೋಮವಾರದಂತೆ ಮಂಗಳವಾರವೂ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಾಗತೊಡಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸುವ ಮೂಲಕ ಜನರನ್ನು ಚದುರಿಸಿದ್ದು ಸಂಪೂರ್ಣ ರಾಜ್ಯ ಪೂರ್ವಾಹ್ನ 11 ಗಂಟೆ ವೇಳೆಗಾಗಲೇ ಲಾಕ್‌ಡೌನ್‌ ಆಯಿತು.

ಏತನ್ಮಧ್ಯೆ ಹೋಂ ಕ್ವಾರಂಟೈನ್‌ಗೆ ಸೂಚಿಸಿ ಕೈಗೆ ಸೀಲ್‌ ಹಾಕಲಾಗಿದ್ದ ಕೆಲ ಮಂದಿಯೂ ಮನೆ ಬಿಟ್ಟು ಬೀದಿ ಸುತ್ತಾಡಿದ ಘಟನೆಗಳು ರಾಜ್ಯ ರಾಜಧಾನಿ ಬೆಂಗಳೂರು, ಬಾಗಲಕೋಟೆ, ವಿಜಯಪುರ, ಕಾರವಾರ, ಕಲಬುರಗಿ, ಚಿಕ್ಕಬಳ್ಳಾಪುರಗಳಲ್ಲಿ ನಡೆದಿದ್ದು, ಈ ರೀತಿ ಸೂಚನೆ ಮೀರಿ ತಿರುಗಾಡಿದ 18 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಸಾಮೂಹಿಕ ನಿಗಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಬಿಗಡಾಯಿಸಿದ ಪರಿಸ್ಥಿತಿ: ಬೆಂಗಳೂರು, ಕಲಬುರಗಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಡಿಕೇರಿ, ಉಡುಪಿ, ಕಾರವಾರ ಸೇರಿದಂತೆ ಹೆಚ್ಚಿನ ನಗರ, ಪಟ್ಟಣಗಳಲ್ಲಿ ಬೆಳಗ್ಗೆ ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆಗಳು ತೆರೆಯುತ್ತಿದ್ದಂತೆ ಜನ ಹಾಲು, ಹಣ್ಣು, ತರಕಾರಿ, ಮೀನು, ದಿನಸಿ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದರು. ಯುಗಾದಿ ಹಬ್ಬದ ಹಿಂದಿನ ದಿನವಾಗಿದ್ದರಿಂದ ಜನದಟ್ಟಣೆ ಹೆಚ್ಚೇ ಇತ್ತು. ಬೆಳಗ್ಗೆ ವೇಳೆ ಪೊಲೀಸರೇ ತಡೆದು ವಿಚಾರಿಸಿ ಅಗತ್ಯ, ತುರ್ತು ಕಾರಣಗಳನ್ನು ನೀಡಿದವರನ್ನಷ್ಟೇ ಸಂಚರಿಸಲು ಅನುವು ಮಾಡಿಕೊದ್ದಾರೆ. ಆದರೆ ಹೊತ್ತು ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು.

ಈ ವೇಳೆ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಧ್ವನಿವರ್ಧಕಗಳಲ್ಲಿ ಸಮಾಧಾನದಿಂದ ಎಚ್ಚರಿಕೆ ನೀಡಿದರೂ ಜನರು ಮಾತ್ರ ಓಡಾಟ ನಿಲ್ಲಿಸಿರಲಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುವುದನ್ನು ಮನಗಂಡ ಪೊಲೀಸರು ಸುಮಾರು 10 ಗಂಟೆಯ ಬಳಿಕ ದಂಡಂ ದಶಗುಣಂ ಎಂಬಂತೆ ಲಾಠಿ ರುಚಿ ತೋರಿಸಿದ್ದಾರೆ.

ಅಟ್ಟಾಡಿಸಿ ಹೊಡೆದರು: ನಿಯಮ ಮೀರಿ ರಸ್ತೆಗಳಿದ ವಾಹನ ಸವಾರರು, ಭಂಡ ಧೈರ್ಯದಿಂದ ಬಾಡಿಗೆ ನಡೆಸುತ್ತಿದ್ದ ಆಟೋ ಚಾಲಕರನ್ನು, ವ್ಯಾಪಾರಿಗಳನ್ನು, ಗ್ರಾಹಕರನ್ನು ಹಿಗ್ಗಾಮುಗ್ಗಾ ಆಟ್ಟಾಡಿಸಿ ಹೊಡೆದಿದ್ದಾರೆ. ಕೊಪ್ಪಳದ ಹೊಲದಲ್ಲಿ ತರಕಾರಿ ಮಾರುಕಟ್ಟೆಸೃಷ್ಟಿಸಿ ವ್ಯಾಪಾರಕ್ಕಿಳಿದಿದ್ದ ವ್ಯಾಪಾರಿಗಳು, ದಳ್ಳಾಳಿಗಳನ್ನು ರೈತರನ್ನು ಪೊಲೀಸರು ದಾಳಿ ನಡೆಸಿ ಚದುರಿಸಿದ್ದಾರೆ. ದಾವಣಗೆರೆಯಲ್ಲಿ ಸ್ವತಃ ಎಸ್‌ಪಿಯವರೇ ತೆರೆದಿದ್ದ ಬಟ್ಟೆಅಂಗಡಿಯೊಂದಕ್ಕೆ ನುಗ್ಗಿ ಲಾಠಿ ಚಾಚ್‌ರ್‍ ಮಾಡಿ ಜನರನ್ನು ಚದುರಿಸಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತುಮಕೂರಲ್ಲಿ ಆಟೋವೊಂದನ್ನು ವಶಕ್ಕೆ ಪಡೆಯಲಾಗಿದ್ದರೆ, ಕೋಲಾರದಲ್ಲಿ ರಸ್ತೆಗಿಳಿದವರಿಗೆ ಪೊಲೀಸರು ದಂಡ ಹಾಕಿದ್ದಾರೆ.

ಇದರೊಂದಿಗೆ ಮೈಸೂರು-ಊಟಿ ರಸ್ತೆಯಲ್ಲಿ ಬೈಕ್‌ ಸವಾರಿ ನಡೆಸುತ್ತಿದ್ದವರಿಗೆ, ಮಡಿಕೇರಿಗೆ ಝೂಮ್‌ ಕಾರ್‌ನಲ್ಲಿ ಪ್ರವಾಸ ಬಂದಿದ್ದ ಬೆಂಗಳೂರಿನ ಯುವಕರಿಗೂ ಲಾಠಿ ರುಚಿ ತೋರಿಸಿದ್ದಾರೆ. ಜೊತೆಗೆ ಮಂಗಳೂರಲ್ಲಿ ಅನಗತ್ಯವಾಗಿ ಓಡಾಡಿಕೊಂಡಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯಿಂದ ಬೆಚ್ಚಿಬಿದ್ದ ಜನತೆ ಜಾಗ ಖಾಲಿ ಮಾಡಿದ್ದರಿಂದ ಮಧ್ಯಾಹ್ನ ವೇಳೆಗೆ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂತು.