Asianet Suvarna News Asianet Suvarna News

ಸಿಎಂ ಮನವಿಗೆ ನಿರ್ಲಕ್ಷ್ಯ: ಹಳ್ಳಿಯತ್ತ ಪೇಟೆ ಮಂದಿ ದಾಂಗುಡಿ: ವೈರಸ್ ಹರಡುವ ಭೀತಿ!

ಹಳ್ಳಿಗಳತ್ತ ಪೇಟೆ ಮಂದಿ ದಾಂಗುಡಿ: ಸೋಂಕು ಭೀತಿ| ಸಿಎಂ ಮನವಿ, ಜಾಗೃತಿಗೂ ಕ್ಯಾರೇ ಅನ್ನದ ನಗರಿಗರು| ಬೆಂಗಳೂರು, ವಿವಿಧ ನಗರಗಳಿಂದ ಊರಿನತ್ತ ಜನರು| ನಾಳೆ ಯುಗಾದಿ ಹಬ್ಬ, ನಗರಗಳಲ್ಲಿ ಲಾಕ್‌ಡೌನ್‌ ಆಗಿ ಕೆಲಸವಿಲ್ಲದ ಹಿನ್ನೆಲೆ| ಬೆಂಗಳೂರು ನಗರ, ಮೈಸೂರಿನಂತಹ ನಗರಗಳಿಂದ ಊರಿಗೆ ತೆರಳಿದ ಜನ| ಶೇ.35 ಜನ ನಗರಗಳಲ್ಲಿದ್ದರೆ, ಶೇ.60ಕ್ಕೂ ಹೆಚ್ಚು ಜನಸಂಖ್ಯೆ ಹಳ್ಳಿಗಳಲ್ಲಿ| ಇದರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಕೊರೋನಾ ಹಬ್ಬುವ ಅಪಾಯ

Coronavirus Outbreak Karnataka People Living In City Rushing Towards Villages
Author
Bangalore, First Published Mar 24, 2020, 7:02 AM IST

ಬೆಂಗಳೂರು(ಮಾ.23):  ‘ಎಲ್ಲಿದ್ದಿರೋ ಅಲ್ಲೇ ಇರಿ. ಎಲ್ಲಿಗೂ ಹೋಗದಿರಿ. ಮುಖ್ಯವಾಗಿ ಹಳ್ಳಿಗಳತ್ತ ಹೋಗಬೇಡಿ. ವಿದೇಶದಲ್ಲಿದ್ದವರು ನಗರ ಪ್ರದೇಶಗಳಿಗೆ ತಂದಿರುವ ಈ ಮಹಾಮಾರಿಯನ್ನು ನಗರ ಪ್ರದೇಶದಲ್ಲಿದ್ದವರು ಹಳ್ಳಿಗಳಿಗೆ ಒಯ್ಯಬಾರದು...’

ಹೀಗಂತ ಮಾಧ್ಯಮಗಳು ಸತತವಾಗಿ ಜಾಗೃತಿ ಮೂಡಿಸುತ್ತಿವೆ. ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶೇಷ ಲೇಖನ ಬರೆದು ಪರಿಪರಿಯಾಗಿ ಕೋರಿದ್ದಾರೆ. ಆದರೂ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಕೈಗೆ ದೊರೆತ ವಾಹನವೇರಿ ಗ್ರಾಮೀಣ ಪ್ರದೇಶದತ್ತ ದಾಂಗುಡಿಯಿಡುತ್ತಿದ್ದಾರೆ.

ಇದರಿಂದ ಇದುವರೆಗೂ ನಗರಗಳಿಗೆ ಸೀಮಿತವಾಗಿದ್ದ ಈ ಮಹಾಮಾರಿ ನಮ್ಮ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಅಪಾಯ ತಲೆದೋರಿದ್ದು, ವೈದ್ಯಕೀಯ ಸೌಲಭ್ಯ ದುರ್ಲಭವಾಗಿರುವ ಗ್ರಾಮೀಣ ಭಾರತವನ್ನು ಈ ಮಹಾಮಾರಿ ಮುಟ್ಟಿಬಿಟ್ಟರೆ ದೇಶ ಗಂಡಾಂತರಕ್ಕೆ ಸಿಲುಕುವ ಭೀತಿ ಎದುರಾಗಿದೆ.

ರಾಜ್ಯ ಸರ್ಕಾರ ಒಂಬತ್ತು ಜಿಲ್ಲೆಗಳನ್ನು ‘ಲಾಕ್‌ಡೌನ್‌’ ಎಂದು ಘೋಷಣೆ ಮಾಡಿದ್ದರೂ ಜನರು ಸ್ವಲ್ಪ ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಜನರು ಮನೆಯಿಂದ ಹೊರಬರದಂತೆ, ಪ್ರಯಾಣ ಮಾಡದಂತೆ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದ್ದರೂ ಜನರು ರಸ್ತೆಗಿಳಿಯುತ್ತಿದ್ದಾರೆ. ಹೀಗೆ ಗುಂಪುಗೂಡಿ ಸಂಚರಿಸಿದ ಜನರು ಇದೀಗ ನಗರ ಪ್ರದೇಶ ತೊರೆದು ಗ್ರಾಮಗಳತ್ತ ಧಾವಿಸತೊಡಗಿದ್ದಾರೆ. ಇದು ಅಪಾಯಕಾರಿ.

ಇಟಲಿ ಮುಂತಾದ ದೇಶಗಳಲ್ಲಿ ಜನರು ತರಗೆಲೆಯಂತೆ ಪ್ರಾಣ ಕಳೆದುಕೊಳ್ಳಲು ಪ್ರಮುಖ ಕಾರಣ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣ ಮಾಡಿದ್ದು. ಪುಟ್ಟಇಟಲಿ ದೇಶದ ಗತಿಯೇ ಈ ರೀತಿಯಾದರೆ ಕರ್ನಾಟಕದ ಶೇ.60ಕ್ಕೂ ಹೆಚ್ಚು ಮಂದಿ ವಾಸಿಸುವ ಹಳ್ಳಿಗಳಿಗೆ ಕೊರೋನಾ ಹರಡಿದರೆ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟಾಗುವುದರಲ್ಲಿ ಸಂಶಯವೇ ಇಲ್ಲ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದ 27,028 ಹಳ್ಳಿಗಳಲ್ಲಿ ಒಟ್ಟು 3,74,69,335 ಜನರು ವಾಸ ಮಾಡುತ್ತಿದ್ದಾರೆ. ಅದರಲ್ಲಿ 1,89,29,354 ಪುರುಷರಿದ್ದರೆ, 1,85,39,981 ಮಂದಿ ಮಹಿಳೆಯರಿದ್ದಾರೆ. ಅಂದರೆ ಕರ್ನಾಟಕದ ಶೇಕಡ 60ಕ್ಕೂ ಹೆಚ್ಚು ಮಂದಿ ಹಳ್ಳಿಗಳಲ್ಲಿ ವಾಸವಿದ್ದರೆ, ಶೇಕಡ 35ಕ್ಕೂ ಹೆಚ್ಚು ಮಂದಿ ನಗರ ಮತ್ತು ಅರೆನಗರಗಳಲ್ಲಿ ವಾಸಿಸುತ್ತಿದ್ದಾರೆ.

ಇಂತಹ ಶುದ್ಧ ಪರಿಸರ, ಯಾವುದೇ ರೋಗ-ರುಜಿನಗಳಿಲ್ಲದ ನೆಮ್ಮದಿಯಾಗಿ ಬದುಕು ಸಾಗಿಸುತ್ತಿರುವ ಹಳ್ಳಿಗಳಿಗೆ ಮಾರಣಾಂತಿಕ ವೈರಸ್‌ ತಲುಪದೇ ಇರುವಂತೆ ನೋಡಿಕೊಳ್ಳಲೇಬೇಕಾಗಿದೆ. ಹಳ್ಳಿಯ ಜನರ ಆರೋಗ್ಯ ಕೆಟ್ಟರೆ ನಗರವಾಸಿಗಳ ಅನ್ನಕ್ಕೆ ಕುತ್ತು ಬರುತ್ತದೆ ಎಂಬ ಎಚ್ಚರಿಕೆಯನ್ನು ಹೊಂದಿರಲೇಬೇಕು.

ಅದಕ್ಕಿಂತ ಹೆಚ್ಚಾಗಿ ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಲು ನಗರ ಪ್ರದೇಶಗಳಲ್ಲಿ ಹತ್ತು ಹಲವಾರು ಸೌಲಭ್ಯ, ದೊಡ್ಡ ಕಾರ್ಯಪಡೆ, ತಜ್ಞ ವೈದ್ಯಕೀಯ ಸಿಬ್ಬಂದಿ ಇದೆ.ಹೆಚ್ಚು ಕಡಿಮೆ ರಾಜ್ಯ ಸರ್ಕಾರ ಈಗ ಪ್ರತಿ ಜಿಲ್ಲೆಗಳಲ್ಲಿ ಕೊರೋನಾ ವೈರಸ್‌ ಪೀಡಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಆದರೆ ಇಂಥಹ ವ್ಯವಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲವೇ ಇಲ್ಲ,

ಈ ಹಿನ್ನೆಲೆಯಲ್ಲಿ ರೋಗ ಗುಣಪಡಿಸುವುದಕ್ಕಿಂತ, ರೋಗ ತಡೆಗಟ್ಟುವುದು ಜಾಣತನ ಎನ್ನುವ ಗಾದೆಯ ಮಾತಿನ ಹಾಗೆ ಬೆಂಗಳೂರು ನಗರ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಕಾರಣಕ್ಕೆ ಹಳ್ಳಿಗಳಿಗೆ ಭೇಟಿ ನೀಡಕೂಡದು ಎಂದು ತಜ್ಞರು ಹೇಳುತ್ತಾರೆ.

Follow Us:
Download App:
  • android
  • ios