ಬೆಂಗಳೂರು(ಮಾ.25): ಕೊರೋನಾ ವೈರಸ್‌ ಕೋವಿಡ್‌-19 ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುವಂತಾಗಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ಅವರ ಹೊಣೆಗಾರಿಕೆಯನ್ನು ವಿಭಜಿಸಿದ್ದಾರೆ.

ಶ್ರೀರಾಮುಲು ಅವರು ಕೋವಿಡ್‌-19 ಕಾರ್ಯಪಡೆಯ ಮುಖ್ಯಸ್ಥರಾಗಿ ಮುಂದುವರೆಯಲಿದ್ದು, ರಾಜ್ಯಾದ್ಯಂತ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಸುಧಾಕರ್‌ ಅವರು ಬೆಂಗಳೂರಿನ ಮತ್ತು ಬೆಂಗಳೂರಿನಲ್ಲಿರುವ ವಾರ್‌ ರೂಂನ ಮೇಲ್ವಿಚಾರಣೆ ಮಾಡಲಿದ್ದಾರೆ.

ಆದರೆ, ಈ ಹೊಣೆಗಾರಿಕೆಯ ವಿಭಜನೆ ಮಾಡಿದ್ದು ಉಭಯ ಸಚಿವರಿಗೂ ಸಮಾಧಾನ ತಂದಿಲ್ಲ. ಬದಲಾಗಿ ಅಸಮಾಧಾನವನ್ನೇ ಹುಟ್ಟು ಹಾಕಿದೆ.

ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಶಿಫಾರಸ್ಸಿನ ಅನ್ವಯ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರಿಗೆ ಕೋವಿಡ್‌-19ಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳ ಹೊಣೆಗಾರಿಕೆ ವಹಿಸಿ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಅಧಿಸೂಚನೆ ಹೊರಡಿಸಿದರು. ಅಂದರೆ, ಶ್ರೀರಾಮುಲು ಅವರನ್ನು ಕೋವಿಡ್‌-19 ಹೊಣೆಗಾರಿಕೆಯಿಂದ ಹೊರಗಿಡಲಾಯಿತು.

ಅದರ ಬೆನ್ನಲ್ಲೇ ಶ್ರೀರಾಮುಲು ಪಾಳೆಯ ತೀವ್ರ ಬೇಸರಗೊಂಡು ಪಕ್ಷದ ವರಿಷ್ಠರಿಗೂ ಮೌಖಿಕವಾಗಿ ದೂರು ರವಾನಿಸಿತು. ಇಂಥದೊಂದು ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಶ್ರೀರಾಮುಲು ಅವರ ಗಮನಕ್ಕೂ ತಂದಿರಲಿಲ್ಲ. ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್‌-19 ಕುರಿತ ಸಭೆ ನಡೆಸಲು ಹೊರಟಿದ್ದರು. ಮಾರ್ಗಮಧ್ಯೆ ಆದೇಶ ಹೊರಬಿದ್ದಿರುವ ಸಂಗತಿ ಗೊತ್ತಾಗಿ ಬೇಸರದಿಂದ ವಾಪಸಾಗಿದ್ದರು.

ಶ್ರೀರಾಮುಲು ಅವರನ್ನು ಕಡೆಗಣಿಸಲಾಗಿದೆ ಎಂಬುದನ್ನು ಮನಗಂಡ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚನೆ ರವಾನಿಸಿದರು ಎನ್ನಲಾಗಿದೆ. ನಂತರ ಸಂಜೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿ, ಶ್ರೀರಾಮುಲು ಅವರು ಕೋವಿಡ್‌-19 ಕಾರ್ಯಪಡೆಯ ಮುಖ್ಯಸ್ಥರಾಗಿ ಮುಂದುವರೆಯಲಿದ್ದು, ರಾಜ್ಯಾದ್ಯಂತ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಸುಧಾಕರ್‌ ಅವರು ಬೆಂಗಳೂರಿನ ಮತ್ತು ಬೆಂಗಳೂರಿನಲ್ಲಿರುವ ವಾರ್‌ ರೂಂನ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಆದರೆ, ಇದು ಉಭಯ ಸಚಿವರಿಗೂ ಸಮಾಧಾನ ತಂದಂತಿಲ್ಲ. ಕೋವಿಡ್‌-19 ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಮ್ಮನ್ನು ಬೆಂಗಳೂರು ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂಬ ಬೇಸರ ಶ್ರೀರಾಮುಲು ಅವರಿಗಿದ್ದರೆ, ತಮಗೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂಬ ನಿರಾಸೆ ಸುಧಾಕರ್‌ ಅವರಿಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.