ಮೈಸೂರು(ಮಾ..31): ನಂಜನಗೂಡಿನ ಜುಬಿಲೆಂಟ್‌ ನೌಕರರ ಪೈಕಿ 10 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಮೈಸೂರಿನಲ್ಲಿ ಹೈಅಲರ್ಟ್‌ ಘೋಷಿಸಲಾಗಿದ್ದು, ನೆರೆಯ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಈ ಕಂಪನಿಯಲ್ಲಿ ನಂಜಗೂಡು ಮಾತ್ರವಲ್ಲದೆ ನೆರೆಯ ಮಂಡ್ಯ, ಹಾಸನ ಜಿಲ್ಲೆಗಳ ನೌಕರರೂ ಕೆಲಸ ಮಾಡುತ್ತಿದ್ದು, ಅವರ ಮೇಲೂ ನಿಗಾ ಇಡಲಾಗಿದೆ.

ಸಂಸ್ಥೆಯಲ್ಲಿ ಮೊದಲು ಸೋಂಕು ಪತ್ತೆಯಾಗಿದ್ದ ವ್ಯಕ್ತಿ ಜತೆ ಸಂಪರ್ಕ ಹೊಂದಿದ್ದ ಹಾಸನದ 10 ಮಂದಿಯಲ್ಲಿ ಯಾರೊಬ್ಬರೂ ಜಿಲ್ಲೆಗೆ ಬಂದಿಲ್ಲ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಇಬ್ಬರನ್ನು ತಪಾಸಣೆ ನಡೆಸಿದ್ದು, ಸದ್ಯ ಯಾವುದೇ ಸೋಂಕಿನ ಲಕ್ಷಣ ಗೋಚರಿಸಿಲ್ಲ. ಆದರೂ ಅವರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಇನ್ನು ಮಂಡ್ಯ ಮೂಲದ 30 ಮಂದಿ ಮೇಲೂ ನಿಗಾ ಇಡಲಾಗಿದೆ ಎಂದು ತಿಳಿದು ಬಂದಿದೆ.

 

ಲಾಕ್‌ಡೌನಿಂದಾಗಿ ಅಮೆಜಾನ್, ನೆಟ್‌ಫ್ಲಿಕ್ಸ್‌ ವೀಕ್ಷಕರ ಸಂಖ್ಯೆ ಶೇ. 20 ರಷ್ಟು ಹೆಚ್ಚಳ

ಸ್ಥಳೀಯರಲ್ಲಿ ಆತಂಕ: ನಂಜನಗೂಡಲ್ಲಿ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿನ ಬಡಜನರು ವಿಕೆಸಿ, ನೆಸ್ಲೆ, ಬಿ.ವಿ. ಪಂಡಿತ್‌ ಸದ್ವೈದ್ಯ ಶಾಲಾ, ರೀಡ್‌ ಆ್ಯಂಡ್‌ ಟೈಲರ್ಸ್‌ ಸೇರಿ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಜುಬಿಲೆಂಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 1,350ಕ್ಕೂ ಹೆಚ್ಚು ಮಂದಿ ಪೈಕಿ 10 ಮಂದಿಗೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ, ಕಾರ್ಖಾನೆಗೆ ಬೀಗ ಮುದ್ರೆ ಹಾಕಿರುವ ಜಿಲ್ಲಾಡಳಿತ ಕಾರ್ಮಿಕರಿಗೆ ಮನೆಯಲ್ಲೇ ಇರುವಂತೆ ಸೂಚಿಸಿದೆ. ಆದರೆ, ಮೊದಲ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಕುಟುಂಬವನ್ನು ನಗರದ ಹೊರ ವಲಯದ ಹಾಸ್ಟೆಲ… ಮತ್ತು ಶಾಲೆಗಳಲ್ಲಿ ಕ್ವಾರಂಟೈನ್‌ ಮಾಡಲು ಸಿದ್ಧತೆ ನಡೆದಿದೆ.

ಸೋಂಕಿತರು ಯಾವ ಕಡೆಗಳಲ್ಲಿ ಓಡಾಡಿದ್ದಾರೋ, ಯಾರನ್ನು ಭೇಟಿ ಮಾಡಿ ಬಂದಿದ್ದಾರೋ ಎನ್ನುವ ಮಾಹಿತಿ ಇಲ್ಲದ ಕಾರಣ ನಂಜನಗೂಡು, ಮೈಸೂರು ಮಾತ್ರವಲ್ಲದೆ ನೆರೆಯ ಜಿಲ್ಲೆಗಳಲ್ಲೂ ಆತಂಕ ಶುರುವಾಗಿದೆ. ಹೀಗಾಗಿ, ಆಸ್ಪತ್ರೆಯ ಸಮೀಪ ಕ್ಯಾಂಟೀನ್‌ ಇನ್ನಿತರ ಅಂಗಡಿಗಳು, ಎಳನೀರು, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಈಗ ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ಎದುರಾಗಿದೆ.

ತನಿಖೆ: ಏತನ್ಮಧ್ಯೆ ಜುಬಿಲೆಂಟ್‌ ಕಾರ್ಮಿಕರಲ್ಲಿ ಕೊರೋನಾ ಹೇಗೆ ಬಂತು? ಯಾರಿಂದ ಸೋಂಕು ಹರಡಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಪಿ52 ವ್ಯಕ್ತಿ(ಕಂಪನಿಯಲ್ಲಿ ಮೊದಲು ಸೋಂಕು ಪತ್ತೆಯಾದ ವ್ಯಕ್ತಿ) ಗೆ ಕೊರೋನಾ ಪಾಸಿಟಿವ್‌ ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ಮಿಕರ ಹಲವು ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಪಿ52 ವ್ಯಕ್ತಿಗೆ ಮೊದಲು ಸೋಂಕು ಕಂಡು ಬಂತಾ? ಅಥವಾ ಬೇರೆ ಯಾರಿಂದಲೂ ಇವರಿಗೆ ಹರಡಿತಾ? ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಗಂಟೆಗೊಂದು ಸೆಲ್ಫಿ ತೆಗೆದು ಸರ್ಕಾರಕ್ಕೆ ಕಳಿಸಬೇಕು!

ಸೋಂಕಿತ ಪಿ52 ವ್ಯಕ್ತಿಯೊಂದಿಗೆ ಥಾಯ್‌ಲ್ಯಾಂಡ್‌, ಆಸ್ಪ್ರೇಲಿಯಾದಿಂದ ಬಂದ ವ್ಯಕ್ತಿಯೊಂದಿಗೆ ಸಂಪರ್ಕ ಇತ್ತು. ಅವರಿಂದ ಸೋಂಕು ಹರಡಿರಬಹುದು ಎಂಬ ಶಂಕೆಯಿದೆ. ಆದರೆ, ಯಾವುದೂ ಖಚಿತವಾಗಿಲ್ಲ. ಈ ವಿಚಾರವನ್ನು ಸಂಗ್ರಹಿಸುವಲ್ಲಿ ಎಸ್ಪಿ, ತಹಸೀಲ್ದಾರ್‌, ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಕ್ವಾರಂಟೈನ್‌ನಲ್ಲಿರುವ ಪ್ರತಿ 10 ಮನೆಗೆ ಒಬ್ಬ ಪೊಲೀಸ್‌ ಸಿಬ್ಬಂದಿ ನಿಗಾ: ಸಚಿವ

ಮೈಸೂರು: ಕೊರೋನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದ್ದರೂ ಬೇಕಾಬಿಟ್ಟಿತಿರುಗಾಡುತ್ತಿರುವವರ ಮೇಲೆ ಮೈಸೂರು ಜಿಲ್ಲಾಡಳಿತ ಇದೀಗ ಪೊಲೀಸ್‌ ನಿಗಾ ಇರಿಸಲು ಮುಂದಾಗಿದೆ. ಹೋಂ ಕ್ವಾರಂಟೈನ್‌ ಆಗಿರುವ ಪ್ರತಿ ಹತ್ತು ಮನೆಗಳಿಗೆ ಒಬ್ಬ ಪೊಲೀಸ್‌ ಸಿಬ್ಬಂದಿ ನೇಮಿಸಿ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ಸೋಮಣ್ಣ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಂ ಕ್ವಾರಂಟೈನ್‌ನಲ್ಲಿರುವ 1701 ಮಂದಿ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು. ಎಲ್ಲರ ಮೇಲೂ ಪೊಲೀಸರ ನಿಗಾ ಇದ್ದು, ಇದನ್ನೂ ಮೀರಿ ಹೊರಗೆ ಬಂದರೇ ಕ್ರಿಮಿನಕಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.