ಬೆಂಗಳೂರು(ಮಾ.28): ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಶಿಕ್ಷೆಗೊಳಪಟ್ಟಕೈದಿಗಳಿಗೆ ಅವರು ಒಪ್ಪಿದರೆ ತಾತ್ಕಾಲಿಕ ಪೆರೋಲ್‌ ನೀಡಬೇಕು. ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳ ಸಂಬಂಧ ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ನಿರ್ಣಯ ಕೈಗೊಂಡಿದೆ.

ದೇಶದಲ್ಲಿ ಕೊರೋನಾ ವೈರಸ್‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಕೈದಿಗಳ ಆರೋಗ್ಯ ಸುಧಾರಣೆ ಹಾಗೂ ಕೈದಿಗಳಿಗೆ ಸೋಂಕು ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್‌ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಸಭೆ ನಡೆಸಿದ್ದ ಉನ್ನತಾಧಿಕಾರ ಸಮಿತಿ ಶುಕ್ರವಾರ ಈ ನಿರ್ಣಯ ಕೈಗೊಂಡಿದೆ.

ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಶಿಕ್ಷೆಗೊಳಪಟ್ಟಕೈದಿಗಳಿಗೆ ಅವರು ಒಪ್ಪಿದರೆ ತಾತ್ಕಾಲಿಕ ಪೆರೋಲ್‌ ನೀಡಬೇಕು. ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ವಿಚಾರಾಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ನೀಡಲು ಪರಿಶೀಲಿಸುವ ಬಗ್ಗೆ ಉನ್ನತಾಧಿಕಾರ ಸಮಿತಿ ತೀರ್ಮಾನಿಸಲಿದೆ.

ಆಯಾ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಈ ಕುರಿತ ಕಾನೂನು ಮತ್ತು ಆಡಳಿತಾತ್ಮಕ ವಿಚಾರಗಳ ವಿವರಣೆಗಾಗಿ ಮಾ.30ರಂದು ಜಿಲ್ಲಾ ನ್ಯಾಯಾಧೀಶರು, ಬಾಲ ನ್ಯಾಯ ಮಂಡಳಿಗಳ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಲಾಗುವುದು. ಕಾರಾಗೃಹಗಳಲ್ಲಿನ ಸುರಕ್ಷತೆ, ಸ್ವಚ್ಛತೆ ಹಾಗೂ ಅಧಿಕ ಸಂಖ್ಯೆಯಲ್ಲಿ ಕೈದಿಗಳಿರುವ ಕಡೆ ಪರ್ಯಾಯವಾಗಿ ಬಂದೀಖಾನೆ ಇಲಾಖೆ ವಿವಿಧ ಕ್ರಮ ಕೈಗೊಂಡಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ. ಬಸವರಾಜು ತಿಳಿಸಿದ್ದಾರ್‌.

ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಉಮೇಶ್‌ಕುಮಾರ್‌, ರಾಜ್ಯ ಬಂಧಿಖಾನೆ ಇಲಾಖೆ ಡಿಜಿಪಿ ಅಲೋಕ್‌ ಮೋಹನ್‌, ಡಿಐಜಿ ಪಿ.ವಿ.ಆನಂದ ರೆಡ್ಡಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.