ಬೆಂಗಳೂರು(ಮಾ.29): ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಶನಿವಾರ ಮತ್ತೆ 12 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಸಂಜೆ ವೇಳೆಗೆ 64 ಮಂದಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಶುಕ್ರವಾರ ತಡರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಐದು ಮಂದಿಗೆ ಸೋಂಕು ದೃಢಪಟ್ಟಿರುವುದು ಸೇರಿ 69 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿತ್ತು. ಶನಿವಾರ ಮತ್ತೆ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ನಂಜನಗೂಡಿನ 5 ಮಂದಿ, ಉತ್ತರ ಕನ್ನಡದ ಭಟ್ಕಳದಲ್ಲಿ 4 ಮಂದಿ, ಬೆಂಗಳೂರಿನಲ್ಲಿ 2 ಮಂದಿ ಹಾಗೂ ದಾವಣಗೆರೆಯಲ್ಲಿ ಒಬ್ಬ ಸೋಂಕಿತರು ಹೊಸತಾಗಿ ಸೇರ್ಪಡೆಯಾಗಿದ್ದಾರೆ.

ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಅತಿ ಹೆಚ್ಚು (ಒಟ್ಟು 41) ಪ್ರಕರಣಗಳು ವರದಿಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲೂಕಿನಲ್ಲಿ 9 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆ 7, ಉತ್ತರ ಕನ್ನಡ ಜಿಲ್ಲೆ 8 ಪ್ರಕರಣಗಳೊಂದಿಗೆ ಸ್ಥಳೀಯರಿಗೆ ಆತಂಕ ಸೃಷ್ಟಿಸಿವೆ. ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಈ ಹಿಂದೆ ಒಬ್ಬನಿಗೆ ಸೋಂಕು ತಗುಲಿತ್ತು. ಆತನಿಂದಾಗಿ ಈಗ ಹೊಸತಾಗಿ ಐದು ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಶನಿವಾರ ದೃಢಪಟ್ಟಪ್ರಕರಣಗಳ ಪೈಕಿ 54 ವರ್ಷದ ಉತ್ತರ ಕನ್ನಡದ ಮಹಿಳೆಗೆ ಸೋಂಕು ಖಚಿತಗೊಂಡಿದೆ. ಇವರ ಪತಿ ದುಬೈ ಹಾಗೂ ಮುಂಬೈನಿಂದ ಆಗಮಿಸಿ ಇತ್ತೀಚೆಗೆ ಸೋಂಕಿಗೆ ಗುರಿಯಾಗಿದ್ದರು. ಇದೀಗ ಪತ್ನಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಇವರ 28 ವರ್ಷದ ಪುತ್ರಿ ಹಾಗೂ 23 ವರ್ಷದ ಮತ್ತೊಬ್ಬ ಪುತ್ರಿಗೂ ಸೋಂಕು ದೃಢಪಟ್ಟಿದೆ. ಮೂವರೂ ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಪ್ರತ್ಯೆಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ 24 ವರ್ಷದ ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದೆ. ದುಬೈನಿಂದ ಆಗಮಿಸಿದ್ದ 40 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದರು. ಹೀಗಾಗಿ ಇವರಿಗೂ ಸೋಂಕು ತಗುಲಿದೆ. ಇವರನ್ನು ಮಂಗಳೂರಿನಿಂದ ಕಾರಿನಲ್ಲಿ ಭಟ್ಕಳಕ್ಕೆ ಕರೆದುಕೊಂಡು ಬಂದ ಚಾಲಕನಿಗೂ ಸೋಂಕು ದೃಢಪಟ್ಟಿದೆ.

ಲಂಡನ್‌ನಿಂದ ಮಾ.17ರಂದು ವಾಪಸಾಗಿದ್ದ 21 ವರ್ಷದ ಬೆಂಗಳೂರಿನ ನಿವಾಸಿಗೆ ಸೋಂಕು ತಗುಲಿದೆ. ಇವರ ಜೊತೆಯಲ್ಲಿ ಲಂಡನ್‌ನಿಂದ ಆಗಮಿಸಿದ್ದ ಇವರ ತಂದೆಗೆ ಈಗಾಗಲೇ ಸೋಂಕು ದೃಢಪಟ್ಟಿದೆ. ಯುವಕನನ್ನು ಉತ್ತರ ಕನ್ನಡ ಜಿಲ್ಲೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಲಂಡನ್‌ನಿಂದ ವಾಪಸಾಗಿದ್ದ ಬೆಂಗಳೂರಿನ 63 ವರ್ಷದ ನಿವಾಸಿಗೂ ಸೋಂಕು ತಗುಲಿದೆ ಎಂದು ಜಾವೇದ್‌ ಅಖ್ತರ್‌ ತಿಳಿಸಿದರು.

ಗೌರೀಬಿದನೂರಿನಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ:

ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾ ಮೆಕ್ಕಾ ಯಾತ್ರೆಯಿಂದ ವಾಪಸ್ಸಾಗಿದ್ದ 31 ವರ್ಷದ ಸೋಂಕಿತನ ಸಂಪರ್ಕದಲ್ಲಿದ್ದ ಬರೋಬ್ಬರಿ ಐದು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಶುಕ್ರವಾರ ತಡರಾತ್ರಿ ಮಾಹಿತಿ ಹೊರಬಿದ್ದಿದ್ದು, ಶನಿವಾರ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ಖಚಿತಪಡಿಸಿದೆ.

ಗೌರಿಬಿದನೂರಿನ 31ವರ್ಷದ ವ್ಯಕ್ತಿಯ ಮನೆಗೆ ಆಗಮಿಸಿದ್ದ ಹಿಂದೂಪುರ ನಿವಾಸಿಗಳಾದ 23 ವರ್ಷ ಹಾಗೂ 18 ವರ್ಷದ ಇಬ್ಬರು ಯುವಕರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ 70 ವೃದ್ಧ, 32 ವರ್ಷದ ಮಹಿಳೆ, 38 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.