ಬೆಂಗಳೂರು(ಮಾ.29) ಕೊರೋನಾ ಸೋಂಕು ತಡೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಲು ಥ್ರೀ ಸ್ಟಾರ್‌ ಹೋಟೆಲ್‌ ಮಾಲೀಕರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಹುಬ್ಬಳ್ಳಿಯ ಮೆಟ್ರೋಪೊಲಿಸ್‌, ಚಾಮರಾಜನಗರದ ನಿಜಗುಣ ರೆಸಿಡೆನ್ಸಿ ಮತ್ತು ತುಮಕೂರಿನ ಎಸ್‌.ಎಸ್‌.ರೆಸಿಡೆನ್ಸಿ ಹೋಟೆಲ್‌ಗಳ ಮಾಲೀಕರು ಒಟ್ಟಾರೆ ತಮ್ಮ 108 ಕೊಠಡಿಗಳನ್ನು ಕ್ವಾರಂಟೇನ್‌ ಕೇಂದ್ರಗಳಾಗಿ ಬಳಸಲು ಸರ್ಕಾರಕ್ಕೆ ಒಪ್ಪಿಗೆ ಪತ್ರ ನೀಡಿದ್ದಾರೆ.

ಹುಬ್ಬಳ್ಳಿಯ ಕೊಪ್ಪೀಕರ್‌ ರಸ್ತೆಯಲ್ಲಿರುವ ಹೋಟೆಲ್‌ ಉದ್ಯಮಿ ಅಶ್ರಫ್‌ ಅಲಿ ಬಶೀರ್‌ ಅಹ್ಮದ್‌ ಅವರು ತಮ್ಮ ಮೆಟ್ರೊ ಪೊಲೀಸ್‌ ಹೋಟೆಲ್‌ನ ಒಂದು ಭಾಗದ 46 ಕೊಠಡಿಗಳನ್ನು ಕ್ವಾರಂಟೈನ್‌ನಲ್ಲಿರುವವರಿಗಾಗಿ ನೀಡಲು ಸಿದ್ಧ ಎಂದಿದ್ದಾರೆæ. ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರು ತುಮಕೂರಿನ ಬಸ್‌ ನಿಲ್ದಾಣದ ಬಳಿ 30 ಕೊಠಡಿಯ ‘ಎಸ್‌.ಎಸ್‌.ರೆಸಿಡೆನ್ಸಿ’ ಹೋಟೆಲ್‌,ಚಾಮರಾಜನಗರದ ಜನಪ್ರಿಯ ಹೋಟೆಲ್‌ ಉದ್ಯಮಿ, ಬಿಜೆಪಿ ಮುಖಂಡ ಜಿ. ನಿಜಗುಣ ರಾಜುರ 32 ಕೊಠಡಿಗಳ ‘ನಿಜಗುಣ ರೆಸಿಡೆನ್ಸಿ’ ಯನ್ನು ಕ್ವಾರಂಟೈನ್‌ ವಾರ್ಡ್‌ ಆಗಿ ಪರಿವರ್ತಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

ಇಸ್ಫೋಸಿಸ್‌ ಫೌಂಡೇಶನ್‌ನಿಂದಲೂ ನೆರವು

ಮಂಗಳೂರು/ಧಾರವಾಡ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಹೋರಾಟ ನಡೆಸುತ್ತಿರುವ ಸರ್ಕಾರದ ನೆರವಿಗೆ ಡಾ.ಸುಧಾಮೂರ್ತಿ ನೇತೃತ್ವದ ಇಸ್ಫೋಸಿಸ್‌ ಫೌಂಡೇಶನ್‌ ಕೂಡ ಧಾವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ .28 ಲಕ್ಷ ಹಾಗೂ ಧಾರವಾಡ ಜಿಲ್ಲೆ ಹಾಗೂ ಹಾವೇರಿಯ ಶಿಗ್ಗಾಂವಿ ತಾಲೂಕಿನ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸಿಬ್ಬಂದಿಗೆ .48 ಲಕ್ಷ ಮೌಲ್ಯದ ವಸ್ತುಗಳನ್ನು ಒದಗಿಸಲು ನಿರ್ಧರಿಸಿದೆ.