ಹಾವೇರಿ(ಮಾ.30): ಗೂಡ್ಸ್‌ ವಾಹನದಲ್ಲಿ ಕುರಿಗಳಂತೆ ತಾಡಪತ್ರೆಯಲ್ಲಿ ಮುಚ್ಚಿಕೊಂಡು ಕಾರ್ಮಿಕರನ್ನು ಕರೆದೊಯ್ಯುತ್ತಿರುವುದನ್ನು ಪೊಲೀಸರು ಭಾನುವಾರ ತಪಾಸಣೆ ವೇಳೆ ಪತ್ತೆ ಹಚ್ಚಿದ್ದು, ವಾಹನ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸರು ಇಲ್ಲಿಯ ಸಿದ್ದಪ್ಪ ವೃತ್ತದ ಬಳಿ ಸಾರ್ವಜನಿಕರ ಓಡಾಡ ನಿರ್ಬಂಧಿಸುತ್ತಿದ್ದ ವೇಳೆ ಗೂಡ್ಸ್‌ ವಾಹನವೊಂದು ಬಂದಿದೆ. ತಾಡಪತ್ರೆ ಮುಚ್ಚಿಕೊಂಡು ಬಂದಿದ್ದನ್ನು ಗಮನಿಸಿದ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ತಾಡಪತ್ರೆ ತೆಗೆದು ನೋಡಿದರೆ, ಅದರಲ್ಲಿ ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಅವರೊಂದಿಗೆ ಮೂವರು ಮಕ್ಕಳೂ ಇದ್ದರು. ಇವರೆಲ್ಲರೂ ತಾಲೂಕಿನ ಗಾಂಧಿಪುರ ನಿವಾಸಿಗಳು.

ಕೊರೋನಾ ಆತಂಕ: ರೈತನಿಂದ ಉಚಿತ 2 ಲಕ್ಷ ರು. ಮೌಲ್ಯದ ಕಲ್ಲಂಗಡಿ ವಿತರಣೆ

ತೀರ್ಥಹಳ್ಳಿ ತಾಲೂಕಿನಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಕೆಲಸವಿಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿತ್ತು. ಊರಿಗೆ ಬರಲು ಸಾರಿಗೆ ಬಸ್‌ಗಳು ಬಂದ್‌ ಆಗಿದ್ದರಿಂದ ಗೂಡ್ಸ್‌ ವಾಹನದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬರುತ್ತಿದ್ದರು. ಮೊದಲು ಮೋಟೆಬೆನ್ನೂರಿನಿಂದ ಬರುತ್ತಿರುವುದಾಗಿ ಚಾಲಕ ಸುಳ್ಳು ಹೇಳಿದ್ದ. ಬಳಿಕ ಪೊಲೀಸ್‌ ಠಾಣೆಗೆ ಕರೆತಂದು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಗೂಡ್ಸ್‌ ವಾಹನದಲ್ಲಿ ಜನರನ್ನು ಸಾಗಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿ, ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಿ ಗಾಂಧಿಪುರಕ್ಕೆ ಕಳುಹಿಸಲಾಗಿದೆ ಎಂದು ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.