ಧಾರವಾಡ(ಮಾ.26): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಆತಂಕದ ಹಿನ್ನಲೆಯಲ್ಲಿ ಶಂಕಿತರ ಹೋಂ ಕ್ವಾರಂಟೈನ್‌ ಸೌಲಭ್ಯಕ್ಕಾಗಿ ಹುಬ್ಬಳ್ಳಿಯ ಅಶ್ರಫ್ ಅಲಿ ಬಷೀರ್ ಎಂಬುವರು ತಮ್ಮ ಹೋಟೆಲ್‌ ನೀಡಿದ್ದಾರೆ.

ಮುಂಬೈನ ಮೆಟ್ರೊಪೊಲಿಸ್ ಸಮೂಹಕ್ಕೆ ಸೇರಿದ ಹೊಟೇಲ್‌ನಲ್ಲಿ ಆಶ್ರಫ್ ಅಲಿ ಬಷೀರ್ ಹೊಟೇಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ದೀಪಾ ಚೋಳನ್‌ ಭೇಟಿ ಮಾಡಿದ ಅಶ್ರಫ್ ಅಲಿ ಬಷೀರ್ ಅವರು ಕೊರೋನಾ ಶಂಕಿತರ ಹೋಂ ಕ್ವಾರಂಟೈನ್‌ಗಾಗಿ ಹೊಟೇಲ್ ನೀಡಿದ್ದಾರೆ. 

ಯುಗಾದಿ ದಿನ ಚಾಮುಂಡೇಶ್ವರಿಗೆ ಭಕ್ತೆಯ ವಿಶೇಷ ಪ್ರಾರ್ಥನೆ, ವೈರಲ್ ಆಯ್ತು ವಿಡಿಯೋ

ಹುಬ್ಬಳ್ಳಿ ನಗರದ ಕೊಪ್ಪಿಕರ ರಸ್ತೆಯಲ್ಲಿರುವ 46 ಕೊಠಡಿಗಳುಳ್ಳ ದೊಡ್ಡ ಹೊಟೇಲ್ ಇದಾಗಿದೆ. ಹೊಟೇಲ್‌ನಲ್ಲಿ ಉಚಿತ ಊಟ, ಉಪಹಾರ ನೀಡಲು ನಿರ್ಧರಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ಹೊಟೇಲ್ ನೀಡಲು ಮುಂದಾದ ಬಷೀರ್ ಕಾರ್ಯಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್‌f ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಜಿಲ್ಲೆಯಾದ್ಯಂತ ಸಿಆರ್‌ಪಿಸಿ ಕಲಂ 144 ಜಾರಿಗೊಳಿಸಿ, ಸಾರ್ವಜನಿಕರಿಗೆ ಮನೆಯಿಂದ ಹೊರಬಂದಂತೆ ಆದೇಶಿಸಲಾಗಿದೆ. ಆದರೆ ತರಕಾರಿ, ಹಾಲು,ಕಿರಾಣಿ ಸೇರಿದಂತೆ ಅಗತ್ಯ ದಿನಬಳಕೆ ವಸ್ತುಗಳ ಪೂರೈಕೆ ಮಾಡಲು ಹಾಗೂ ಕೋವಿಡ್ 19 ತಡೆಗಟ್ಟುವ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ, ಖಾಸಗಿ ಸಂಸ್ಥೆಯ ವಾಹನಗಳಿಗೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ವಾಟ್ಸಾಪ್‌ನಲ್ಲಿ ಕೊರೋನಾ ಸುಳ್ಳು ಸುದ್ದಿ ಪರೀಕ್ಷೆಗೆ ಹೊಸ ಫೀಚರ್‌!

ಕೇಂದ್ರ, ರಾಜ್ಯ ಸರ್ಕಾರದ ಇಲಾಖೆ, ಕಚೇರಿಗಳಿಂದ ನೀಡಲ್ಪಟ್ಟ ಗುರುತಿನ ಚೀಟಿಗಳನ್ನು ಹೊಂದಿರುವ ಕರ್ತವ್ಯ ನಿರತರಿಗೆ ಅವರ ಕಾರ್ಯಕ್ಷೇತ್ರದಲ್ಲಿ ವಿನಾಯಿತಿ ನೀಡಲಾಗಿದೆ. ಎಲ್ಲಾ ಸರ್ಕಾರಿ ವಾಹನಗಳಿಗೆ ವಿನಾಯಿತಿ ಇದೆ. ಸರ್ಕಾರ ಹೊರಗುತ್ತಿಗೆ ಮೂಲಕ ಪಡೆದುಕೊಂಡ ಖಾಸಗಿ ವಾಹನಗಳಿಗೆ ಜಿಲ್ಲಾಡಳಿತ ವಾಹನ ಪಾಸುಗಳನ್ನು ನೀಡಿದೆ.

ಸಾರ್ವಜನಿಕ ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಕಾರರು ಮತ್ತು ಸಿಬ್ಬಂದಿಗಳ ವಾಹನಗಳಿಗೆ , ಸರ್ಕಾರಿ ಮತ್ತು ಖಾಸಗಿ ವೈದ್ಯರು,ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು, ಸಿಬ್ಬಂದಿ , ಪತ್ರಿಕಾ ವಿತರಣೆ ವಾಹನಗಳು, ಪತ್ರಿಕೆ ಹಂಚುವವರು, ಅವಶ್ಯ ಸರಕು ಸೇವೆಗಳ ಸಾಗಾಣಿಕೆ ವಾಹನಗಳು,ಅವಶ್ಯಕ ಸಾಮಗ್ರಿಗಳ ಉತ್ಪಾದನಾ ಕಾರ್ಖಾನೆಗಳ ಕಾರ್ಮಿಕರಿಗೆ ಸರ್ಕಾರದ ಸುತ್ತೋಲೆಯ ನಿರ್ಬಂಧದಂತೆ ಅವರ ವಾಸ ಸ್ಥಳದಿಂದ ಕಾರ್ಖಾನೆಯ ಸ್ಥಳಕ್ಕೆ ಹೋಗಿ ಬರಲು ಹಾಗೂ ಜಿಲ್ಲಾಡಳಿತ ಕೋವಿಡ್ 19 ಸೇವೆಯಲ್ಲಿ ನಿರತರಾದವರಿಗೆ ನೀಡಿದ ಗುರುತಿನ ಚೀಟಿ ಹೊಂದಿರುವ ವ್ಯಕ್ತಿಗಳು ಮತ್ತು ವಾಹನಗಳಿಗೆ ಸಂಚರಿಸಲು ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.