ಬೆಳಗಾವಿ(ಏ.03): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಾವು ಬೆಳೆದ ಮೆಣಸಿನಕಾಯಿ ಮಾರಾಟವಾಗದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕು ಅವರೊಳ್ಳಿ ಗ್ರಾಮದ ರೈತನೊಬ್ಬ, ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅವರೊಳ್ಳಿ ಗ್ರಾಮದ ಕಲ್ಲಪ್ಪ ಬಾಳೆಕುಂದ್ರಿ (54) ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ. ಕಲ್ಲಪ್ಪ ವಿವಿಧ ಬ್ಯಾಂಕುಗಳಲ್ಲಿ .5.55 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಜತೆಗೆ ಇದರಲ್ಲಿ ಆತ ಕೈಗಡ ಸಾಲವನ್ನೂ ಪಡೆದುಕೊಂಡಿದ್ದ ಎನ್ನಲಾಗಿದೆ. ಕಳೆದ ವರ್ಷ ಅತಿವೃಷ್ಟಿಯಾದ ಹಿನ್ನೆಲೆಯಲ್ಲಿ ಭತ್ತದ ಬೆಳೆ ಕೈಕೊಟ್ಟಿತ್ತು.

7 ಕ್ವಿಂಟಾಲ್‌ ಮೆಣಸು ರಸ್ತೆಗೆ ಸುರಿದ ಮಾಜಿ ಯೋಧ

ಮತ್ತೆ ಹೇಗಾದರೂ ಸಾಲ ಮಾಡಿ ತನ್ನ ಎರಡೂವರೆ ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದು ಪ್ರತಿ ಕೆಜಿಗೆ .5, .6ಗೆ ಇಳಿದಿತ್ತು. ದರ ಕುಸಿದ್ದರಿಂದ ಕಲ್ಲಪ್ಪ ಮಾನಸಿಕವಾಗಿ ನೊಂದಿದ್ದ.

ಈ ಕುರಿತಾಗಿ ಕಲ್ಲಪ್ಪನಿಗೆ ಹೆಂಡತಿ ಮಕ್ಕಳು ಧೈರ್ಯ ಹೇಳಿದ್ದರು. ಆದರೂ ಸಾಲ ತೀರಿಸಲು ಬೇರೆ ದಾರಿ ತೋಚದ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.