ಬಾಗಲಕೋಟೆ(ಮಾ.28): ಕೊರೋನಾ ಭೀತಿ ದೇಶದಾದ್ಯಂತ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಕೋವಿಡ್‌-19ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಕೋವಿಡ್‌-19 ವೈರಸ್‌ ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸೇವೆಯನ್ನು ಎಲ್ಲ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯರ ತುರ್ತು ಸೇವೆ ಅಗತ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಯಾಗಿರುವುದರಿಂದ ಯಾವುದೇ ಸಂದರ್ಭದಲ್ಲಿ ಜಿಲ್ಲಾಡಳಿತ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ತುರ್ತು ಸೇವೆಯನ್ನು ನಿರೀಕ್ಷಿಸಿ ಆದೇಶಿಸಿದಲ್ಲಿ ಆದೇಶವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಆದೇಶ ಉಲ್ಲಂಘಿಸಿದಲ್ಲಿ ಅಂತವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 188ರಡಿ ಶಿಸ್ತು ಕ್ರಮಕೈಗೊಳ್ಳುವುದರ ಜೊತೆಗೆ ಕ್ರಿಮಿನಲ್‌ ಮೊಕದ್ದಮೆ ಕೂಡಾ ದಾಖಲಿಸಲಾಗಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.

ಕೊರೋನಾ ಆತಂಕ: ಸ್ವಯಂಪ್ರೇರಿತರಾಗಿ ಡೆಟಾಯಿಲ್‌ ನೀರಿನಿಂದ ರಸ್ತೆ ಶುಚಿಗೊಳಿಸಿದ ಗ್ರಾಮಸ್ಥರು!

ಮನೆಯನ್ನು ಖಾಲಿ ಮಾಡಿಸುವಂತಿಲ್ಲ:

ಜಿಲ್ಲೆಯ ಸರ್ಕಾರಿ, ಖಾಸಗಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆಗಳಿಗಾಗಿ ಹಾಗೂ ವಾಸಕ್ಕಾಗಿ ಬಾಡಿಗೆಗಾಗಿ ನೀಡಿದ ಕಟ್ಟಡವನ್ನು ಮಾಲೀಕರು ತುರ್ತು ಪರಿಸ್ಥಿತಿಯಲ್ಲಿ ಕಟ್ಟಡ, ಮನೆಯನ್ನು ಖಾಲಿ ಮಾಡಿಸುವಂತಿಲ್ಲ. ಖಾಲಿ ಮಾಡಿಸುತ್ತಿರುವುದು ಕಂಡು ಬಂದಲ್ಲಿ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60 ರನ್ವಯ ಶಿಸ್ತುಕ್ರಮ ಕೈಗೊಳ್ಳುವುದರ ಜೊತೆಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಗಡಿ ದಾಟದಂತೆ ಎಚ್ಚರಿಕೆ:

ಕೊರೋನಾ ಭೀತಿ ಹಿನ್ನಲೆಯಲ್ಲಿ ಕೋವಿಡ್‌-19ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು, ತಾಲೂಕು ಮತ್ತು ಗಡಿ ದಾಟದಂತೆ ಹಾಗೂ ಬೇರೆ ಜಿಲ್ಲೆ, ತಾಲೂಕುಗಳಿಂದಲೂ ಜಿಲ್ಲೆ, ತಾಲೂಕಿನ ಗಡಿ ಪ್ರವೇಶಿಸದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಭಂದಿಸಲಾಗಿದೆ ಎಂದು ತಿಳಿಸಿದರು.

ಕೊರೋನಾ ಐಸೋಲೇಶನ್ ವಾರ್ಡ್‌ ತೆರೆಯಲು ಸ್ಥಳೀಯರ ವಿರೋಧ

ದೇಶವ್ಯಾಪಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಕೋವಿಡ್‌-19ನ್ನು ಹರಡದಂತೆ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿರುತ್ತದೆ. ಈಗಾಗಲೇ ಈ ಬಗ್ಗೆ ಸಾಕಷ್ಟುತಿಳುವಳಿಕೆಯನ್ನು ಮಾಧ್ಯಮ, ಢಂಗುರ ಹಾಗೂ ಭಿತ್ತಿಪತ್ರಗಳ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿರುತ್ತದೆ. ಆದಾಗ್ಯೂ ಸಾರ್ವಜನಿಕರು ಮನೆಯಿಂದ ಹೊರಗೆ ಅನಾವಶ್ಯಕವಾಗಿ ತಿರುಗಾಡುತ್ತಿರುವುದು ಹಾಗೂ ರಾತ್ರಿ ಹೊತ್ತು ವೃತ್ತಗಳಲ್ಲಿ ಗುಂಪು ಗುಂಪಾಗಿ ಯುವಕರು ಸೇರುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ವಸತಿ ಪ್ರದೇಶದಿಂದ ಹೊರಗಡೆ ಬರದಂತೆ ಮನವಿ ಮಾಡಿಕೊಂಡಿದ್ದಾರೆ.