ಕಾರವಾರ(ಏ.05): ಅಂಗ್ಡಿನೆ ನಮ್ಗೆ ಜೀವನಕ್ಕ ಆಧಾರನ್ರಿ. ಆದ್ರೆ ಕಳೆದ 10 ದಿನದಿಂದ ನಮ್‌ ಅಂಗ್ಡಿ ಬಂದ್‌ ಇಟ್ಟೆವ್ರಿ. ಅದಕ ಕೈಯಲ್ಲಿ ಕಾಸೆ ಇಲ್ದೊದಂಗೆ ಆಗದ ಎಂದು ಅಲಿಗದ್ದ ಬಳಿ ಗೂಡಂಗಡಿ ಮಾಲಕಿ ನಂಜಮ್ಮ ಅಲವತ್ತುಕೊಂಡ ಪರಿಯಿದು.

ಇದು ಕೇವಲ ಇವರೊಬ್ಬರ ವ್ಯಥೆಯಲ್ಲ, ನಗರದಲ್ಲಿ ಇರುವ ನೂರಾರು ಗೂಡಂಗಡಿಕಾರರ, ಆಟೋರಿಕ್ಷಾ ಚಾಲಕರ ಸ್ಥಿತಿ. ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ಆಟೋರಿಕ್ಷಾ, ಗೂಡಂಗಡಿಕಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ದಿನನಿತ್ಯದ ದುಡಿಮೆಯಲ್ಲಿ ಬದುಕುತ್ತಿದ್ದ ಇವರು ದುಡಿಮೆ ಇಲ್ಲದೇ ಕಂಗಾಲಾಗಿದ್ದಾರೆ.

ಲಾಕ್‌ಡೌನ್‌: ತಪ್ಪಿಸಿಕೊಳ್ಳಲು ಹೋಗಿ ಪೇದೆ ಮೇಲೆಯೇ ಬೈಕ್‌ ಹರಿಸಿ ಪರಾರಿ!

ಅಂಗಡಿ ಮುಂಗಟ್ಟು, ಸಾರಿಗೆ ಎಲ್ಲ ಸಂಪೂರ್ಣವಾಗಿ ಬಂದ್‌ ಆಗಿದೆ. ಕಾರಣ ದಿನದ ದುಡಿಮೆಯಲ್ಲಿ ಬದುಕುತ್ತಿದ್ದವರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. 200ಕ್ಕೂ ಅಧಿಕ ಗೂಡಂಗಡಿ, 600ರಿಂದ 700 ಆಟೋರಿಕ್ಷಾಗಳಿದ್ದು, ಇದೇ ಕಸುಬನ್ನೇ ನಂಬಿಕೊಂಡು ನೂರಾರು ಕಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಕಳೆದ 10 ದಿನಗಳಿಂದ ಆಟೋ ಓಡಿಸಲು, ಗೂಡಂಗಡಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಇಲ್ಲ. ನಿಷೇಧಾಜ್ಞೆ ಮುಗಿಯುವವರೆಗೂ ಸಂಪೂರ್ಣವಾಗಿ ಬಂದ್‌ ಇಡಬೇಕಾಗಿದ್ದು, ಕೋವಿಡ್‌19 ಹೊತ್ತಿನ ಊಟಕ್ಕೂ ಸಮಸ್ಯೆ ತಂದಿಟ್ಟಿದೆ.

ಬಹುತೇಕ ಆಟೋ, ಗೂಡಂಗಡಿಯವರು ದಿನದ ದುಡಿಮೆಯಲ್ಲಿ ಬದುಕುತ್ತಾರೆ. ಆದರೆ ಲಾಕ್‌ಡೌನ್‌ನಿಂದ ಆದಾಯವೇ ಇಲ್ಲದಾಗಿದೆ. ದಿನದ ಊಟ, ಸಾಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡಲು ಆರಂಭಿಸಿದೆ. ಕೋವಿಡ್‌19 ಸಾಂಕ್ರಾಮಿಕ ಕಾಯಿಲೆ ಬಂದಾಗ ಲಾಕ್‌ಡೌನ್‌ ಅನಿವಾರ್ಯ. ಆದರೆ ನಮ್ಮ ಬದುಕಿಗೆ ಈ ಕಾಯಿಲೆ ಬರೆ ಎಳೆದಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳುತ್ತಾರೆ.

ಕೈಯಲ್ಲಿ ಇರುವ ಕಾಸು ಕಾಲಿ ಆಗುತ್ತಿದೆ. ಸಣ್ಣದಾದ ಗೂಡಂಗಡಿಯನ್ನು ಹಾಕಿಕೊಂಡು ಚಹ, ಕಾಫಿ, ತಿಂಡಿ ತಿನಿಸು ತಯಾರಿಸಿ ಮಾರಾಟ ಮಾಡುತ್ತೇವೆ. ದಿನದ ಖರ್ಚಿಗೆ ಆಗುವಷ್ಟುವ್ಯಾಪಾರ ಆಗುತ್ತದೆ. ಆದರೆ ಲಾಕ್‌ಡೌನ್‌ನಿಂದ ಆದಾಯವೇ ಇಲ್ಲ ಎಂದು ಗೂಡಂಗಡಿ ಮಾಲೀಕ ಮಂಜುನಾಥ ಗೌಡ ಹೇಳಿದ್ದಾರೆ.  

ಸಾಲ-ಸೋಲ ಮಾಡಿ ಆಟೋರಿಕ್ಷಾ ಖರೀದಿ ಮಾಡಿದವರು ಇದ್ದಾರೆ. ಆದರೆ ಮಾರಕ ರೋಗದಿಂದ ಆಟೋ ಓಡಾಟ ಸಂಪೂರ್ಣವಾಗಿ ನಿಂತಿದ್ದು, ಚಾಲಕರನ್ನು ಚಿಂತೆಗೀಡಾಗಿಸಿದೆ. ಬಹುತೇಕ ಆಟೋಚಾಲಕರು ಅಂದಿನ ದುಡಿಮೆಯಲ್ಲಿ ಬದುಕು ಸಾಗಿಸುತ್ತಾರೆ. ಆದರೆ ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದಂತಾಗಿದೆ ಎಂದು ಆಟೋರಿಕ್ಷಾ ಚಾಲಕ ರೋಷನ್‌ ಹರಿಕಂತ್ರ ತಿಳಿಸಿದ್ದಾರೆ.