ಕಲಬುರಗಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆ

ಕಳೆದ 3 ದಿನಗಳ ಹಿಂದಷ್ಟೆ ದಿಲ್ಲಿಯಿಂದ ಮರಳಿದ್ದ ವ್ಯಕ್ತಿಯ ಪತ್ನಿಗೆ ಸೋಂಕು ಪತ್ತೆ| ಇದೀಗ ಆತನ ಸೊಸೆಗೆ ಸೋಂಕು| ಗಂಟಲು ದ್ರವ ಮಾದರಿ ಪರೀಕ್ಷೆಗೆ ಕೊಟ್ಟ ನಂತರವೂ ಮನೆಯಲ್ಲಿ ನಾಲ್ಕು ದಿನಗಳ ಕಾಲ ಎಲ್ಲರೊಂದಿಗೆ ಬೆರೆತ ಸೋಂಕಿತ ಮಹಿಳೆ|

Another Coronavirus Positive Case in Kalaburagi

ಕಲಬುರಗಿ/ಶಹಾಬಾದ್‌(ಏ.06): ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಸೋಂಕಿನ ಪ್ರಕರಣ ಭಾನುವಾರ ಪತ್ತೆಯಾಗಿದೆ.

ಜಿಲ್ಲೆಯ ಶಹಾಬಾದ್‌ನಿಂದ ದಿಲ್ಲಿ ನಿಜಾಮುದ್ದೀನ್‌ ಸಭೆಗೆ ಹೋಗಿ ಮರಳಿದ್ದ ವ್ಯಕ್ತಿಯ ಸೊಸೆಗೆ ಇದೀಗ ಸೋಂಕು ಖಚಿತವಾಗಿದೆ. ಈ ಮುಂಚೆ 2 ದಿನಗಳ ಹಿಂದಷ್ಟೇ ಈ ವ್ಯಕ್ತಿಯ ಹೆಂಡತಿಗೆ ಸೋಂಕು ಪತ್ತೆಯಾಗಿತ್ತು. ಇದೀಗ ಅದೇ ಕುಟುಂಬದಲ್ಲಿ ಸೊಸೆಗೆ ಸೋಂಕು ಕಂಡು ಬಂದಿದೆ.

ತಬ್ಲಿಘಿ ಜಮಾತ್‌ ಕಾರ್ಯಕರ್ತರ ಪತ್ತೆಗೆ ದೆಹಲಿ ಪೊಲೀಸರ ತಂತ್ರ

ಶಹಾಬಾದ್‌ ಪಟ್ಟಣದ ನಗರದಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಕಳೆದ 3 ದಿನಗಳ ಹಿಂದಷ್ಟೆ ಜಿಲ್ಲಾಡಳಿತ ದಿಲ್ಲಿ ನಿಜಾಮುದ್ದಿನ್‌ನಿಂದ ಬಂದಿದ್ದ ವ್ಯಕ್ತಿ ಹಾಗೂ ಆತನ ಪತ್ನಿಗೆ ಕೋವಿಡ್‌-19 ಪರೀಕ್ಷೆಗೆ ಒಳಪಡಿಸಿದ್ದಾಗ ಆತನ ಪತ್ನಿಗೆ ಕೊರೋನಾ ‘ಪಾಸಿಟಿವ್‌’ ಬಂದಿತ್ತು.

ಹೀಗಾಗಿ ಕಳೆದ ಏ.2ರಂದೇ ಅದೇ ಕುಟುಂಬದ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು, ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು, ಅವರ ಮನೆಯ ಸಿಸಿ ಟೀವಿ ರಿಪೇರಿಗೆ ಆಗಮಿಸಿದ್ದ ಕೆಲಸಗಾರನನ್ನು ಕೊವಿಡ್‌- 19 ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಈ ಹಂತದಲ್ಲಿ ಇವರೆಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಪಡೆದು ಮತ್ತೆ ಅಂದೇ ರಾತ್ರಿ ಅವರವರ ಮನೆಗಳಿಗೆ ತಂದು ಬಿಡಲಾಗಿತ್ತು. ಕೋವಿಡ್‌ 19 ಪರೀಕ್ಷೆ ಗೆಂದು ಗಂಟಲು ದ್ರವ ಪಡೆದ 3 ನೇ ದಿನಕ್ಕೆ ಐವರಲ್ಲಿ 30 ವರ್ಷದ ಮಹಿಳೆ (ದಿಲ್ಲಿ ವ್ಯಕ್ತಿಯ ಸೊಸೆ) ಗೆ ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ಮಗ ಮತ್ತು ಸೊಸೆಗೆ ಮತ್ತೆ ವಿಶೇಷ ಅಂಬುಲನ್ಸ್‌ ಮೂಲಕ ಭಾನುವಾರ ಸಂಜೆ ಇಸ್‌ಐಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಜಿಲ್ಲಾಡಳಿತ- ವೈದ್ಯರ ನಿರ್ಲಕ್ಷ?:

ದಿಲ್ಲಿಯಿಂದ ಬಂದಿದ್ದ ವ್ಯಕ್ತಿಯ ಹೆಂಡತಿಗೆ ಕೊರೋನಾ ಸೋಂಕು ಕಂಡಿದ್ದರಿಂದ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು, ಓರ್ವ ವೈದ್ಯರ ಪರೀಕ್ಷೆಗೆ ಗಂಟಲು ದ್ರವ ತೆಗೆದುಕೊಂಡ ನಂತರ ಇಎಸ್‌ಐಸಿ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ಕನಿಷ್ಠ ವರದಿ ಬರುವವರೆಗಾದರೂ ಇಟ್ಟುಕೊಳ್ಳಬಹುದಿತ್ತು. ಆದರೆ, ತರಾತುರಿಯಲ್ಲಿ ಇವರನ್ನೆಲ್ಲ ಮನೆಗೆ ಯಾಕೆ ಕಳುಹಿಸಲಾಯ್ತೋ ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.

ಸೋಂಕು ಪತ್ತೆಯಾದ ಮಹಿಳೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕೊಟ್ಟ ನಂತರವೂ ಮನೆಯಲ್ಲಿ ನಾಲ್ಕು ದಿನಗಳ ಕಾಲ ಎಲ್ಲರೊಂದಿಗೆ ಇದ್ದಾಳೆ, ಆಕೆಗೆ 2 ಮಕ್ಕಳಿವೆ. ಪತಿ, ಮಕ್ಕಳೊಂದಿಗೆ ಇರುವಾಗ ಆಕೆಗೇ ಸೋಂಕು ಖಚಿತವಾಗಿದ್ದರಿಂದ ಇದು ಇನ್ನೆಷ್ಟು ಜನರಿಗೆ ಹಬ್ಬಿರಬಹುದೋ ಎಂಬ ಶಂಕೆಗೆ ಕಾರಣವಾಗಿ ಆತಂಕ ಮೂಡಿಸಿದೆ.

ಜಿಲ್ಲಾಡಳಿತ- ವೈದ್ಯರ ನಿರ್ಲಕ್ಷದಿಂದ ಅವರನ್ನು ತರಾತುರಿಯಲ್ಲಿ ಮನೆಗೆ ಕಳುಹಿಸಿದ್ದೇ ತಪ್ಪಾಯ್ತೆ? ಅವಳ ಪತಿ, ಮೊಮ್ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಗಳು ದಟ್ಟವಾದುವೆ? ಇದಕ್ಕೆ ಯಾರು ಹೊಣೆ? ಈ ಪ್ರಕರಣ ಕಲಬುರಗಿ ಜಿಲ್ಲೆಯಾದ್ಯಂತ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಇದುವರೆಗೂ 5 ಪಾಸಿಟಿವ್‌ ಪ್ರಕರಣ ಕಂಡ್ದಿವು. ಈ ಪೈಕಿ ಸಾವನ್ನಪ್ಪಿರುವ ಅಜ್ಜನನ್ನು ಹೊರತು ಪಡಿಸಿದರೆ ಇನ್ನಿಬ್ರು ಗುಣುಖರಾಗಿ ಮನೆಗೆ ಮರಳಿದ್ದಾರೆ. ಇದೀಗ ಇಬ್ಬರು ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿದ್ದರು. ಇದೀಗ ಶಹಾಬಾದ್‌ನ ಈ ಪ್ರಕರಣದೊಂದಿಗೆ ಜಿಲ್ಲೆಯ 6 ನೇ ಪ್ರಕರಣ ಪತ್ತೆಯಾದಂತಾಗಿದೆ.
 

Latest Videos
Follow Us:
Download App:
  • android
  • ios