ಕಾರವಾರ(ಏ.04): ಜನ ವಸತಿ ಪ್ರದೇಶದಲ್ಲಿ ಲಾಕ್‌ ಡೌನ್‌ ಆಗಿರುವುದರಿಂದ ಕಾಡು ಪ್ರಾಣಿಗಳು ಪಟ್ಟಣ ಪ್ರದೇಶಕ್ಕೆ ನುಗ್ಗುತ್ತಿವೆ. ತಮ್ಮ ಆವಾಸವನ್ನು ವಿಸ್ತರಿಸಿಕೊಳ್ಳುತ್ತಿವೆ. ಯಲ್ಲಾಪುರ ಪಟ್ಟಣದಲ್ಲಿ ಕಾಡಾನೆ ಓಡಾಡಿದೆ. ಜಿಂಕೆ, ಕಾಡುಹಂದಿಗಳು ರಸ್ತೆಯಲ್ಲಿ ಗೋಚರಿಸುತ್ತಿವೆ.

ಕೋವಿಡ್‌ 19 ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ ಡೌನ್‌ ಘೋಷಿಸಿದೆ. ನಗರ, ಪಟ್ಟಣ ಪ್ರದೇಶಗಳು ಬಿಕೋ ಎನ್ನುತ್ತಿವೆ. ಉತ್ತರ ಕನ್ನಡದ ನಗರ, ಪಟ್ಟಣಗಳಲ್ಲಿ ಆಹಾರ ಹಾಗೂ ಜೀವನಾವಶ್ಯಕ ಸಾಮಗ್ರಿಗಳನ್ನು ಮನೆ ಮನೆಗೆ ಪೂರೈಸುವ ವ್ಯವಸ್ಥೆ ಕಲ್ಪಿಸಿರುವುದರಿಂದ ಪಟ್ಟಣಗಳಲ್ಲಿ ಅಂಗಡಿಗಳು ಬಂದಾಗಿವೆ. ಇದರಿಂದ ಜನರ ಓಡಾಟ ನಿಂತಿದೆ. ರಸ್ತೆಗಳಲ್ಲಿ ವಾಹನ ಸಂಚಾರವೂ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ಪೇಟೆ, ಪಟ್ಟಣಗಳು, ಹೆದ್ದಾರಿಗಳಲ್ಲಿ ವಿಹರಿಸುತ್ತಿವೆ.

ಸಾಮೂಹಿಕ ನಮಾಜ್‌: 15 ಜನರ ಬಂಧನ

ಯಲ್ಲಾಪುರದ ಡೌಗಿನಾಲಾ ಬಳಿ ಮಂಗಳವಾರ ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿತ್ತು. ಗುರುವಾರ ಸಂಜೆ ಮತ್ತೊಂದು ಆನೆ ಮರಿ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಸುತ್ತಾಡಿದೆ. ಪಟ್ಟಣ ವ್ಯಾಪ್ತಿಯ ನಾಯಕನಕೇರಿ ಬಳಿ ಇರುವ ತೋಟಗಾರಿಕಾ ಇಲಾಖೆಯ ಫಾಮ್‌ರ್‍ ಹಾಗೂ ಹುಲ್ಲರ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಹರಿಸಿದೆ.

ಕಾರವಾರ ಕದ್ರಾ ರಸ್ತೆಯಲ್ಲಿ ಸಾಂಬಾರ್‌, ಜಿಂಕೆಗಳು ಕಾಣಿಸುತ್ತಿವೆ. ಕದ್ರಾ ಜೋಯಿಡಾ ನಡುವೆ ಕಾಡು ಪ್ರಾಣಿಗಳನ್ನು ರಸ್ತೆಯಲ್ಲೇ ಕಾಣಬಹುದು. ನವಿಲು, ಹಾರ್ನಬಿಲ್‌ ಮತ್ತಿತರ ಪಕ್ಷಿಗಳು ಸಹ ಕಾಣುತ್ತಿವೆ. ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಜಿಂಕೆಗಳು, ಸಿದ್ದಾಪುರದಲ್ಲಿ ಕಾಡುಕೋಣವನ್ನು ನೋಡಿದವರಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

ವಾಹನಗಳ ಭರಾಟೆ, ಜನ ಸಂಚಾರ ಹಾಗೂ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿರುವುದರಿಂದ ಕಾಡುಪ್ರಾಣಿಗಳು ಸಹಜವಾಗಿ ಸ್ವಚ್ಛಂದವಾಗಿ ಓಡಾಡುತ್ತಿವೆ ಎಂದು ಯಲ್ಲಾಪುರ ಎಸಿಎಫ್‌ ಅಶೋಕ ಭಟ್‌ ತಿಳಿಸಿದ್ದಾರೆ.

-ವಸಂತಕುಮಾರ್‌ ಕತಗಾಲ