ಮೋಹನ ಹಂಡ್ರಂಗಿ

ಬೆಂಗಳೂರು(ಏ. 01): ಕೊರೋನಾ ವೈರಸ್‌ ಭೀತಿಯಿಂದ ಬೆಚ್ಚಿ ಬಿದ್ದಿರುವ ಸಾರ್ವಜನಿಕರು ಅಗತ್ಯಕ್ಕಿಂತ ಹೆಚ್ಚಿನ ಔಷಧಿಗಳ ಖರೀದಿಗೆ ಮುಂದಾಗಿರುವ ಪರಿಣಾಮ ಔಷಧಿ ಅಂಗಡಿಗಳಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ.

ಲಾಕ್‌ಡೌನ್‌ ನಡುವೆ ಅಗತ್ಯ ಸೇವೆಗಳ ವ್ಯಾಪ್ತಿಗೆ ಬರುವ ಔಷಧಿಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೂ ಸಾರ್ವಜನಿಕರು ಅಗತ್ಯಕ್ಕಿಂತ ಹೆಚ್ಚಿನ ಔಷಧಿಗಳ ಖರೀದಿಗೆ ಔಷಧಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಔಷಧಿ ತಯಾರಿಕಾ ಕಂಪನಿಗಳು ಕಾರ‍್ಯ ನಿರ್ವಹಿಸುತ್ತಿದ್ದು, ಔಷಧಿಗಳಿಗೆ ಕೊರತೆ ಉಂಟಾಗುವುದಿಲ್ಲ. ಅಗತ್ಯ ಎಷ್ಟಿದೆಯೂ ಅಷ್ಟುಮಾತ್ರ ಖರೀದಿಸಿ ಎಂದರೂ ಕಿವಿಗೊಡದ ಜನರು ಔಷಧಿ ಅಂಗಡಿಗಳ ಎದುರು ಸಾಲುಗಟ್ಟಿನಿಲ್ಲುತ್ತಿದ್ದಾರೆ.

ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನರು, ಒಂದು- ಎರಡು ತಿಂಗಳ ಔಷಧಿಗಳನ್ನು ಮುಂಗಡವಾಗಿ ಖರೀದಿಸುತ್ತಿದ್ದಾರೆ. ಇದರಿಂದ ಇನ್ನು ಕೆಲವೇ ದಿನಗಳಲ್ಲಿ ಈ ಔಷಧಿಗಳ ಕೊರತೆ ಉಂಟಾಗಬಹುದು ಎಂದು ಶ್ರೀನಿವಾಸ ನಗರದ ವಿಶ್ವಾಸ ಮೆಡಿಕಲ್‌ ಶಾಪ್‌ನ ಸಿಬ್ಬಂದಿ ರಘುವೀರ್‌ ಹೇಳುತ್ತಾರೆ. ಒಮ್ಮೆಗೆ ಇಷ್ಟುಔಷಧಿ ಖರೀದಿಸುವ ಅಗತ್ಯವಿಲ್ಲ ಎಂದರೂ ಯಾರಿಗೂ ಕೇಳುವ ತಾಳ್ಮೆ ಇಲ್ಲ ಎನ್ನುತ್ತಾರೆ ಕೆಂಪೇಗೌಡ ನಗರದ ಶಾಂಭವಿ ಮೆಡಿಕಲ್‌ ಶಾಪ್‌ನ ಮಾಲೀಕ ಗುಣಶೇಖರ್‌.

ಆತಂಕದಲ್ಲೇ ವ್ಯಾಪಾರ:

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಯಾರೊಬ್ಬರು ಕೇಳುವುದಿಲ್ಲ. ಚೀಟಿ ನೋಡಿ ಔಷಧಿ ನೀಡುವುದೇ ಸವಾಲಾಗಿದೆ. ಔಷಧಿ ಅಂಗಡಿಗಳಿಗೆ ಬರುವವರಲ್ಲೇ ಯಾರಿಗಾದೂ ಸೋಂಕಿದ್ದರೆ ಏನು ಮಾಡೋದು ಎಂದು ಬ್ಯಾಂಕ್‌ ಕಾಲೋನಿಯ ಬೆಂಗಳೂರು ಮೆಡಿಕಲ್‌ ಶಾಪ್‌ನ ಸಿಬ್ಬಂದಿ ಹರ್ಷ ಆತಂಕ ವ್ಯಕ್ತಪಡಿಸುತ್ತಾರೆ.

ಮಾಸ್ಕ್‌ ಕೊರತೆ ಇದೆ:

ಕೊರೋನಾ ವೈರಸ್‌ ಸುದ್ದಿ ಹರಡುತ್ತಿದ್ದಂತೆ ಜನ ಮುಗಿಬಿದ್ದು ಫೇಸ್‌ ಮಾಸ್ಕ್‌ಗಳನ್ನು ಖರೀದಿಸಿದ ಪರಿಣಾಮ ಮಾಸ್ಕ್‌ಗಳ ಕೊರತೆ ಉಂಟಾಗಿದೆ. ಈ ನಡುವೆ ಕೊಂಚ ಪೂರೈಕೆಯಾದರೂ ಅದು ಕೂಡ ಬಹುತೇಕ ಖಾಲಿಯಾಗಿದೆ. ಆರಂಭದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಕೊರತೆ ಉಂಟಾಗಿತ್ತಾದರೂ ಈಗ ಪೂರೈಕೆಯಾಗಿದೆ ಎಂದು ಚಾಮರಾಜಪೇಟೆಯ ವಿನಾಯಕ ಮೆಡಿಕಲ್‌ ಶಾಪ್‌ನ ಸಿಬ್ಬಂದಿ ಪ್ರವೀಣ್‌ ಹೇಳಿದರು.