ಲಾಕ್‌ಡೌನ್ ಎಫೆಕ್ಟ್: ಮದ್ಯ ಸಿಗದೆ ಮನೋರೋಗಿಗಳಾದ ಕುಡುಕರು!
ಲಾಕ್‌ಡೌನ್‌ನಿಂದ ಬಾರ್, ವೈನ್ ಶಾಪ್ ಬಂದ್| ಕುಟುಂಬದ ಸದಸ್ಯರೊಂದಿಗೆ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಮದ್ಯವ್ಯಸನಿಗಳು| ಕಳೆದ ನಾಲ್ಕಾರು ದಿನಗಳಿಂದ ಮದ್ಯವ್ಯಸನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಹೆಚ್ಚಿದೆ|
ಹಾವೇರಿ(ಏ.05): ಲಾಕ್‌ಡೌನ್ ಆದಾಗಿನಿಂದ ಬಾರ್, ವೈನ್ ಶಾಪ್ ಬಂದ್ ಆಗಿ ಕುಡುಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು, ನಿತ್ಯವೂ ಆರೋಗ್ಯ ತಪಾಸಣೆಗೆ ಹತ್ತಾರು ಮದ್ಯವ್ಯಸನಿಗಳು ಬರುತ್ತಿದ್ದಾರೆ.
ಕಳೆದ 10 ದಿನಗಳಿಂದ ಎಲ್ಲಿಯೂ ಎಣ್ಣೆ ಸಿಗದೇ ಮದ್ಯವ್ಯಸನಿಗಳು ಮನೋರೋಗಿಗಳಂತೆ ಆಡುತ್ತಿರುವ ಪ್ರಕರಣ ಜಿಲ್ಲೆಯ ವಿವಿಧೆಡೆ ಕಂಡುಬಂದಿದೆ. ವಿನಾಕಾರಣ ಜಗಳ ತಂಟೆ ತೆಗೆದು ಕುಟುಂಬದವರೊಂದಿಗೆ ಜಗಳವಾಡುವುದು, ಹುಚ್ಚರಂತೆ ಬಟ್ಟೆ ತೆಗೆದುಕೊಂಡು ಓಡಾಡುವುದು, ನಿದ್ದೆ ಮಾಡದಿರುವುದು, ನಡೆಯಲಾಗದ ಸ್ಥಿತಿ, ಕೈಕಾಲು ಗಡಗಡ ನಡುಗುವುದು ಸೇರಿದಂತೆ ಮನೋರೋಗಿಗಳಂತೆ ಆಡುತ್ತಿರುವುದರಿಂದ ಬೇಸತ್ತ ಕುಟುಂಬದ ಸದಸ್ಯರು ಅಂಥವರನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಕಳೆದ ನಾಲ್ಕಾರು ದಿನಗಳಿಂದ ಮದ್ಯವ್ಯಸನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಹೆಚ್ಚಿದೆ. ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಕುಡುಕರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಹೋಗಿದ್ದಾರೆ.
ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!
ಮುಕ್ತಿ ಕೇಂದ್ರವೂ ಬಂದ್:
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಇಲ್ಲಿಯ ಅನ್ನಪೂರ್ಣ ಮದ್ಯವ್ಯಸನಿ ಮುಕ್ತಿ ಕೇಂದ್ರವನ್ನು ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಇದರಿಂದ ಕಳೆದ 15 ದಿನಗಳಿಂದ ಯಾವ ಮದ್ಯವ್ಯಸನಿಗಳನ್ನೂ ಸೇರಿಸಿಕೊಂಡಿಲ್ಲ. ಸದ್ಯ ಕುಡುಕರಿಗೆ ಎಣ್ಣೆ ಸಿಗದೇ ಖಿನ್ನತೆಗೆ ಒಳಗಾಗುತ್ತಿದ್ದು, ವ್ಯಸನ ಮುಕ್ತ ಕೇಂದ್ರದಲ್ಲಿ ಅಗತ್ಯ ಸಮಾಲೋಚನೆ ಮತ್ತು ಔಷಧ ನೀಡುವ ವ್ಯವಸ್ಥೆ ಮಾಡಬೇಕು ಎನ್ನುವುದು ಮದ್ಯವ್ಯಸನಿಗಳ ಕುಟುಂಬದವರ ಮನವಿಯಾಗಿದೆ.