ಬೆಂಗಳೂರು(ಏ.03): ಕಾರಾಗೃಹಗಳಲ್ಲಿ ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈದಿಗಳ ದಟ್ಟಣೆ ಕಡಿಮೆಗೊಳಿಸಲು 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣಗಳಲ್ಲಿನ 288 ವಿಚಾರಣಾಧೀನ ಕೈದಿಗಳಿಗೆ ಗುರುವಾರ ಮಧ್ಯಂತರ ಜಾಮೀನು ನೀಡಲಾಗಿದೆ.

ಇದೇ ವೇಳೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವ 228 ಸಜಾ ಬಂಧಿಗಳಿಗೆ ತಾತ್ಕಾಲಿಕ ಪೆರೋಲ್ ನೀಡಲು ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಒಟ್ಟು 591 ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಸಿಕ್ಕಂತಾಗಿದೆ.

ಜಿಲ್ಲಾವಾರು ಅಂಕಿ-ಸಂಖ್ಯೆ:

ಬಳ್ಳಾರಿ ಜಿಲ್ಲೆ 18, ಬೆಳಗಾವಿ 64, ಚಿಕ್ಕಬಳ್ಳಾಪುರ 25, ದಕ್ಷಿಣ ಕನ್ನಡ 13, ಗದಗ 5, ಹಾಸನ 20, ಹಾವೇರಿ 23, ಕಲಬುರಗಿ 23, ಕೋಲಾರ 13, ಕೊಪ್ಪಳ 14, ರಾಯಚೂರು 2, ರಾಮನಗರ 30, ಶಿವಮೊಗ್ಗ 18, ತುಮಕೂರು 7, ಉಡುಪಿ 7, ಕಾರವಾರ 10 ಹಾಗೂ ಯಾದಗಿರಿಯಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಆಯಾ ಜಿಲ್ಲಾ ನ್ಯಾಯಾಲಯಗಳು ಗುರುವಾರ ಮಧ್ಯಂತರ ಜಾಮೀನು ನೀಡಿವೆ.

228 ಮಂದಿಗೆ ಪೆರೋಲ್:

ಬಳ್ಳಾರಿ ಜಿಲ್ಲೆಯಲ್ಲಿ 28, ಬೆಳಗಾವಿ 18, ದಕ್ಷಿಣ ಕನ್ನಡ 4, ಧಾರವಾಡ 13, ಹಾಸನ 2, ಕಲಬುರಗಿ 36, ಕೊಡಗು 1, ಮಂಡ್ಯ 2, ಮೈಸೂರು 101, ಶಿವಮೊಗ್ಗ 7, ಉಡುಪಿ 1, ವಿಜಯಪುರ 14 ಶಿಕ್ಷಾರ್ಹ ಅಪರಾಧಿಗಳಿಗೆ ತಾತ್ಕಾಲಿಕ ಪೆರೋಲ್ ನೀಡಲು ಶಿಫಾರಸು ಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ. ಬಸವರಾಜು ಮಾಹಿತಿ ನೀಡಿದ್ದಾರೆ.