ಮಂಗಳೂರು(ಎ.02): ದೇಶಾದ್ಯಂತ ಕೊರೋನಾ ವೈರಾಣು ಸೋಂಕು ಹರಡುವ ಭೀತಿ ಸೃಷ್ಟಿಸಿರುವ ನವದೆಹಲಿಯ ನಿಜಾಮುದ್ದೀನ್‌ ಮಸೀದಿಯ ಧಾರ್ಮಿಕ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬರೋಬ್ಬರಿ 21 ಪಾಲ್ಗೊಂಡಿರುವುದು ಖಚಿತವಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ ಸುಮಾರು 300 ಮಂದಿ ಪಾಲ್ಗೊಂಡು ಹಲವರಿಗೆ ಕೊರೋನಾ ಸೋಂಕು ದೃಢಪಟ್ಟಬೆನ್ನಲ್ಲೇ ಜಿಲ್ಲಾಡಳಿತವು ಆ ಸಭೆಯಲ್ಲಿ ಭಾಗಿಯಾದವರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿ ಇರುವವರ ಮಾಹಿತಿ ಕಲೆಹಾಕತೊಡಗಿದ್ದು, ಅದಕ್ಕಾಗಿ ವಿಶೇಷ ತಂಡ ರಚನೆ ಮಾಡಿತ್ತು. ಇದರ ಪರಿಣಾಮ 21 ಮಂದಿಯನ್ನು ಗುರುತಿಸಿದೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಎಲ್ಲರೂ ನಿಗಾವಣೆ ಕೇಂದ್ರದಲ್ಲಿ: ಎಲ್ಲ 21 ಮಂದಿಯನ್ನು ಸಂಪರ್ಕಿಸಿ, ಅವರನ್ನು ವಿವಿಧ ಆಸ್ಪತ್ರೆಗಳ ನಿಗಾವಣೆ ಕೇಂದ್ರದಲ್ಲಿಡಲಾಗಿದೆ. ಅವರೆಲ್ಲರಿಗೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಗಂಟಲ ದ್ರವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ವರದಿ ಬಂದ ಬಳಿಕ ಖಚಿತ ಮಾಹಿತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

ಎಲ್ಲ 21 ಮಂದಿಯ ಕುಟುಂಬ ಸದಸ್ಯರಿಗೆ ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಈ ವ್ಯಕ್ತಿಗಳು ಯಾವಾಗ ಜಿಲ್ಲೆಗೆ ಆಗಮಿಸಿದರು, ಬಳಿಕದ ದಿನಗಳಲ್ಲಿ ಅವರ ಕಾರ್ಯ ಚಟುವಟಿಕೆಗಳು, ಸಮುದಾಯ ಸಂಪರ್ಕ ಇತ್ಯಾದಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದೂ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಎಲ್ಲರ ಮೇಲೆ ನಿಗಾ

ನಿಜಾಮುದ್ದೀನ್‌ ಮಸೀದಿಯಿಂದ ಅನೇಕರು ಮಾ. 15ರಿಂದ 20ರ ಒಳಗಡೆ ಜಿಲ್ಲೆಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ. ಸೋಂಕಿನ ಲಕ್ಷಣ ಇದುವರೆಗೆ ಬಹುತೇಕರಲ್ಲಿ ಕಂಡುಬಂದಿಲ್ಲ. ಆದರೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾಕ್‌ಡೌನ್: 13 ಕಿ.ಮೀ ನಡೆದೇ ಆಸ್ಪತ್ರೆಗೆ ಹೋಗುವ ಸಿಬ್ಬಂದಿ..!

ಸಮುದಾಯದೊಂದಿಗೆ ಬೆರೆತರೇ?: ದೆಹಲಿಯಿಂದ ಮರಳಿದ ಪಿಲಾರಿನ ವ್ಯಕ್ತಿಯೊಬ್ಬರು ಸ್ಥಳೀಯ ಕಾರ್ಯ ಚಟುವಟಿಕೆ ಗಳಲ್ಲಿ ತೊಡಗಿರುವ ಆರೋಪಗಳೂ ಕೇಳಿಬರುತ್ತಿವೆ. ಇದೇ ರೀತಿ ಇತರರು ಕೂಡ ಸಮುದಾಯದೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಗಳು ದಟ್ಟವಾಗಿವೆ.

ಮಾಹಿತಿ ನೀಡಲು ಮನವಿ

ನಿಜಾಮುದ್ದೀನ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜನರು ಹಾಗೂ ಅವರ ಸಂಪರ್ಕದಲ್ಲಿ ಇರುವವರು ಮಾಹಿತಿ ನೀಡುವಂತೆ ದಕ್ಷಿಣಕನ್ನಡ ಜಿಲ್ಲಾಡಳಿತ ಮನವಿ ಮಾಡಿದೆ. ವಿವರಗಳನ್ನು 1077 ಸಂಖ್ಯೆಗೆ ಡಯಲ್‌ ಮಾಡಿ ತಿಳಿಸುವಂತೆ ಮನವಿ ಮಾಡಿದೆ.