ಕೊಪ್ಪಳ(ಮಾ.30): ಭಾರತ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆದರೂ ಹೊರ ಬಂದು ನಿಯಮ ಉಲ್ಲಂಘಿಸಿದ 11 ಜನರನ್ನು ಕಂಬಿ ಹಿಂದೆ ಕಳುಹಿಸಲಾಗಿದೆ. ಲಾಕ್‌ಡೌನ್‌ ಉಲ್ಲಂಘಿಸಿದ್ದಲ್ಲದೇ ಪೊಲೀಸರ ಜೊತೆ ವಾದ, ಪ್ರತಿವಾದ ಮಾಡುತ್ತಾ ಅವರ ಕರ್ತವ್ಯಕ್ಕೆ ಅಡ್ಡಿ ಮಾಡಿದವರನ್ನು ಜೈಲಿಗೆ ಅಟ್ಟಲಾಗಿದೆ.

ಗಂಗಾವತಿ ಮತ್ತು ಕನಕಗಿರಿ ಠಾಣಾ ವ್ಯಾಪ್ತಿಯಲ್ಲಿಯೇ ಕಳೆದರಡು ದಿನಗಳ ಹಿಂದೆ 7 ಜನರನ್ನ ಬಂಧಿಸಲಾಗಿತ್ತು. ಈಗ ಮತ್ತೆ ಇದೇ ವ್ಯಾಪ್ತಿಯ ಠಾಣೆಯಲ್ಲಿ ಮೂರು ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 11 ಆಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್‌ ಕುಮಾರ ತಿಳಿಸಿದ್ದಾರೆ.

ಕೊರೋನಾ ಭೀತಿ: ವಿದೇಶದಿಂದ ಬಂದವರಿಗೆ ಲಾಸ್ಟ್‌ ಚಾನ್ಸ್‌

ಮತ್ತೆ ಮೂವರು ನಿಗಾದಲ್ಲಿ:

ಜಿಲ್ಲೆಯಲ್ಲಿ ನಿಗಾ ಇಟ್ಟವರ ಸಂಖ್ಯೆ 73 ರಿಂದ 76ಕ್ಕೇರಿದೆ. ಇವರಲ್ಲಿ ರೋಗ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿಲ್ಲ. ಜಿಲ್ಲೆಯಲ್ಲಿ ಯಾವುದೂ ಖಚಿತ ಕೊರೋನಾ ಪ್ರಕರಣ ದಾಖಲಾಗಿಲ್ಲ.

ಗ್ರಾಮಗಳಲ್ಲಿ ಆತಂಕ:

ಜಿಲ್ಲಾದ್ಯಂತ ಕಾರ್ಮಿಕರು ಹೊರಗಡೆಯಿಂದ ಆಗಮಿಸುತ್ತಲೇ ಇದ್ದಾರೆ. ತಮಿಳುನಾಡು, ಮಹಾರಾಷ್ಟ್ರ, ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ನಾನಾ ರಾಜ್ಯ, ಜಿಲ್ಲೆಗೆ ದುಡಿಯಲು ಹೋದವರು ಹಾಗೂ ನೌಕರಿಗೆಂದು ಹೋದವರು ರಾತ್ರೋರಾತ್ರಿ ಬಂದು ಊರು ಸೇರಿಕೊಳ್ಳುತ್ತಿದ್ದಾರೆ.

ಇದು ಗ್ರಾಮೀಣ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದೆ. ಎಲ್ಲಿ ನೋಡಿದರೂ ಇವರದೇ ಸಮಸ್ಯೆಯಾಗಿದ್ದು, ನಿತ್ಯವೂ ಜಿಲ್ಲಾಡಳಿತ ಸಹಾಯವಾಣಿಗೆ ಇಂಥದ್ದೇ ಕರೆ ಬರುತ್ತಿವೆ. ನಮ್ಮೂರಿಗೆ ಬೇರೆ ಪ್ರದೇಶದಿಂದ ಜನರು ಬಂದಿದ್ದಾರೆ. ಅವರ ಆರೋಗ್ಯ ಪರೀಕ್ಷಿಸಿ ಎಂದು ಕೋರುತ್ತಿದ್ದಾರೆ. ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಿರುವವರ ಆರೋಗ್ಯ ತಪಾಸಣೆ ಜಿಲ್ಲಾಡಳಿತಕ್ಕೂ ಸವಾಲಾಗಿದೆ. ಇಂತಹ ಕಾರ್ಮಿಕರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ಅನಾಥರು, ಭಿಕ್ಷುಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡುವುದಕ್ಕೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಅಸ್ಪತ್ರೆ ಶುರು:

ಜಿಲ್ಲೆಯಲ್ಲಿ ಬಂದ್‌ ಆಗಿರುವ ಖಾಸಗಿ ಆಸ್ಪತ್ರೆ ಪ್ರಾರಂಭಿಸಲು ಜಿಲ್ಲಾಡಳಿತ ಕ್ರಮವಹಿಸಿದೆ. ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಮಾ.30 ರಿಂದಲೇ ಖಾಸಗಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಲಾಕ್‌ಡೌನ್‌ ಇರುವುದರಿಂದ ಬಿಗಿ ಬಂದೋಬಸ್ತ್‌ ನೀಡಲಾಗಿದೆ. ಆದರೂ ನಿಯಮ ಮೀರಿ ಆಚೆ ಬಂದವರ ಮೇಲೆ ಪ್ರಕರಣ ದಾಖಲಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ಸಾರ್ವಜನಿಕರು ಆಚೆ ಬರದಿರಿ ಎಂದು ಕೊಪ್ಪಳ ಡಿಸಿ ಪಿ. ಸುನೀಲ್‌ಕುಮಾರ ತಿಳಿಸಿದ್ದಾರೆ.