ಉಡು​ಪಿ(ಮಾ.27): ಉಡುಪಿ ಜಿಲ್ಲೆ​ಯಲ್ಲಿ ಗುರುವಾರ ಮತ್ತೆ 16 ಶಂಕಿತ ಕೊರೋನಾ ವೈರಸ್‌ ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅವರೆಲ್ಲರ ಗಂಟಲದ್ರವಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಶಿವಮೊಗ್ಗದ ಸರ್ಕಾರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 108 ಶಂಕಿತರು ದಾಖಲಾಗಿದ್ದಾರೆ. ಅವರಲ್ಲಿ ಬುಧವಾರ ಒಬ್ಬರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದವರಲ್ಲಿ 79 ಮಂದಿಯ ಪರೀಕ್ಷೆಯ ವರದಿಗಳು ಬಂದಿದ್ದು, ಅವರಿಗೆ ಸೊಂಕಿಲ್ಲ ಎಂದು ಸಾಬೀತಾಗಿದೆ. ಗುರುವಾರ ದಾಖಲಾದ 16 ಸೇರಿದಂತೆ ಇನ್ನೂ 23 ಮಂದಿಯ ಪರೀಕ್ಷೆಯ ವರದಿ ಬರಬೇಕಾಗಿದೆ.

ಕೊರೋನಾ ಆತಂಕ, ಕೆಲ ತಿಂಗಳು EMI ವಿನಾಯಿತಿ!?

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1406 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಅವರಲ್ಲಿ 336 ಮಂದಿಗೆ ಗುರವಾರ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು 91432 ಮನೆಗಳಿಗೆ ಭೇಟಿ ನೀಡಿ, 3,84,010 ಮಂದಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಹಾಗೂ ವಿದೇಶದಿಂದ ಬಂದವರು ಮನೆ ಬಿಟ್ಟು ಹೋಗದಂತೆ ಸೂಚಿಸಿದ್ದಾರೆ.

ಮನೆ ಮುಂದೆ ಪೋಸ್ಟರ್‌:

ವಿದೇಶದಿಂದ ಬಂದವರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಿದ್ದರೂ, ಕೆಲವರು ಹೊರಗೆ ತಿರುಗಾಡುತ್ತಿದ್ದುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿದೇಶದಿಂದ ಬಂದವರ ಮನೆ ಮುಂದೆ, ಈ ಮನೆಯಲ್ಲಿ ವಿದೇಶದಿಂದ ಬಂದವರಿದ್ದಾರೆ. ಆದ್ದರಿಂದ ಯಾರೂ ಈ ಮನೆಗೆ ಹೋಗಬಾರದು ಎಂದು ಪೋ​ಸ್ಟ​ರ್‌​ಗ​ಳನ್ನು ಅಂಟಿಸಿದ್ದಾರೆ. ಈ ವಿದೇಶದಿಂದ ಬಂದವರು ಮನೆಯಿಂದ ಹೊರಗೆ ಬಂದರೆ ಜಿಲ್ಲಾಡಳಿತಕ್ಕೆ ದೂರು ನೀಡುವಂತೆ ಆ ಮನೆಯ ಅಕ್ಕಪಕ್ಕದವರಿಗೆ ಸೂಚಿಸಿದೆ.