ಹುಬ್ಬಳ್ಳಿ(ಏ.06): 104 ಆರೋಗ್ಯ ಸಹಾಯವಾಣಿ ಕೇಂದ್ರದಲ್ಲಿ ದಿನದ 24 ಗಂಟೆ ಕೆಲಸ ನಡೆಯುತ್ತದೆ. ಜನರಿಗೆ ಸಲಹೆ, ಸೂಚನೆ ಕೊಡುವ ಮೂಲಕ ಜನರ ಆರೋಗ್ಯ ಕಾಪಾಡಿಕೊಳ್ಳುವ ಕೆಲಸ ಮಾಡುತ್ತದೆ. ಆದರೆ ವಿಚಿತ್ರವೆಂದರೆ ಇಲ್ಲಿ ಕೆಲಸ ಮಾಡುವವರೇ ಸುರಕ್ಷಿತವಾಗಿಲ್ಲ.

ಹೌದು, ಸಹಾಯವಾಣಿ ಕೇಂದ್ರಗಳಲ್ಲಿನ ನೌಕರರು ಕೊರೋನಾ ಹಿನ್ನೆಲೆಯಲ್ಲಿ ಭಯದಲ್ಲೇ ಕೆಲಸ ಮಾಡುವಂತಾಗಿದೆ. ಈ ಬಗ್ಗೆ ಸಹಾಯವಾಣಿ ಕೇಂದ್ರದಲ್ಲಿ ಕೆಲಸ ಮಾಡುವ ನೌಕರರೇ ಆಂತಕ ವ್ಯಕ್ತಪಡಿಸುತ್ತಾರೆ. ರಾಜ್ಯದಲ್ಲಿ ಕಳೆದ ಏಳು ವರ್ಷದ ಹಿಂದೆ 104 ಸಹಾಯವಾಣಿ ಕೇಂದ್ರ ಆರಂಭವಾಯಿತು. ಹುಬ್ಬಳ್ಳಿ ಮತ್ತು ಬೆಂಗಳೂರಲ್ಲಿ ಮಾತ್ರ ಇದರ ಕಚೇರಿಗಳಿವೆ. ಏಳು ವರ್ಷದ ಹಿಂದೆ ಮೊದಲಿಗೆ ಹುಬ್ಬಳ್ಳಿಯಲ್ಲಿ ಸಹಾಯವಾಣಿ ಕೇಂದ್ರ ಆರಂಭವಾದರೆ ನಂತರ ಕೆಲವು ದಿನ ಕಳೆದ ಮೇಲೆ ಬೆಂಗಳೂರಲ್ಲಿನ ಕೇಂದ್ರ ಪ್ರಾರಂಭವಾಯಿತು.

ಸಾಮಾಜಿಕ ಅಂತರ ಕೇಳಲೇಬೇಡಿ: ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

ಹುಬ್ಬಳ್ಳಿಯಲ್ಲಿ 320ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 7ರಿಂದ ಮಧ್ಯಾಹ್ನ 2, 2 ರಿಂದ ರಾತ್ರಿ 9ರ ವರೆಗೆ ಹಾಗೂ ರಾತ್ರಿ 9ರಿಂದ ಬೆಳಗಿನ 7 ಗಂಟೆ ವರೆಗೆ ಮೂರು ಅವಧಿಯಲ್ಲಿ ಕೆಲಸ ನಡೆಯುತ್ತದೆ. ಹಗಲು ಹೊತ್ತಿನಲ್ಲಿ ಏಳು ಗಂಟೆಯ ಕೆಲಸವಾದರೆ, ರಾತ್ರಿ ಮಾತ್ರ 10 ಗಂಟೆ ಇಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.

ಬೇರೆ ಬೇರೆ ಜಿಲ್ಲೆಯವರು:

ಹುಬ್ಬಳ್ಳಿ ಐಟಿ ಪಾರ್ಕ್‌ನಲ್ಲಿ ಈ ಕೇಂದ್ರವಿದೆ. ಬೇರೆ ಬೇರೆ ಜಿಲ್ಲೆಯವರು ಇಲ್ಲಿ ಕೆಲಸ ಮಾಡುತ್ತಾರೆ. ಅವರು ಬೇರೆ ಬೇರೆ ಪ್ರದೇಶಗಳಲ್ಲಿ ರೂಮ್‌ಗಳನ್ನು ಮಾಡಿಕೊಂಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಅವರನ್ನೆಲ್ಲ ಕರೆದುಕೊಂಡು ಬರಲು ಆರೋಗ್ಯವಾಣಿ ವಾಹನದ ವ್ಯವಸ್ಥೆಯನ್ನೂ ಮಾಡಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಇನ್ನೂ ಕಚೇರಿಯಲ್ಲೂ ಕೆಲಸ ಮಾಡುವಾಗಲೂ ಸಾಮಾಜಿಕ ಅಂತರ ಕಾಯುವಿಕೆ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲ. ಅಕ್ಕಪಕ್ಕವೇ ಕುಳಿತು ನೌಕರರು ಕೆಲಸ ಮಾಡಬೇಕಾಗುತ್ತದೆ. ಒಂದು ಅವಧಿಯಲ್ಲಿ 100ಕ್ಕೂ ಹೆಚ್ಚು ಜನರಿರುತ್ತಾರೆ. ಇನ್ನೂ ಕಚೇರಿಯೊಳಗೆ ಹೋಗುವಾಗ ಸ್ಯಾನಿಟೈಸರ್‌ ವ್ಯವಸ್ಥೆಯೇನೋ ಮಾಡಲಾಗಿದೆ. ಆದರೆ ಮುಖಕ್ಕೆ ಮಾಸ್ಕ್‌ ಆಗಲಿ, ಕಂಪ್ಯೂಟರ್‌ ಆಪರೇಟರ್‌ ಮಾಡುವಾಗ ಹ್ಯಾಂಡ್‌ಗ್ಲೌಸ್‌ನ ವ್ಯವಸ್ಥೆಯಾಗಲಿ ಮಾಡಿಲ್ಲ.

ನಾವು ಬೇರೆಯವರಿಗೆ ಆರೋಗ್ಯದ ಕುರಿತು ಸಲಹೆ ಸೂಚನೆಗಳನ್ನು ನೀಡುತ್ತೇವೆ. ಆದರೆ ನಮಗೆ ಸರಿಯಾದ ಸುರಕ್ಷಾ ಸಾಧನಗಳು ಇಲ್ಲ. ನಮಗೆ ಕೊರೋನಾ ಸೇರಿದಂತೆ ಯಾವುದಾದರೂ ಸೋಂಕು ತಗುಲಿದರೆ ಯಾರು ಜವಾಬ್ದಾರಿ? ಒಬ್ಬರಿಗೇನಾದರೂ ತಗುಲಿದರೂ 320 ಜನರಿಗೂ ತಗುಲುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಮನುಷ್ಯರೇ, ನಮಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಬೇಕಾದ ಕರ್ತವ್ಯ ಸಂಬಂಧಪಟ್ಟಇಲಾಖೆ ಹಾಗೂ ಆರೋಗ್ಯವಾಣಿ ನಿಭಾಯಿಸುವ ಗುತ್ತಿಗೆ ಪಡೆದಿರುವ ಏಜೆನ್ಸಿಯದ್ದು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆ ನೌಕರರ ವರ್ಗದ್ದು.(ಚಿತ್ರ: ಸಾಂದರ್ಭಿಕ ಚಿತ್ರ)