Asianet Suvarna News Asianet Suvarna News

ವದಂತಿಗಳಿಗೆ ಕಿವಿಗೊಡಬೇಡಿ: ಕೊರೋನಾ ಆತಂಕದ ಮಧ್ಯೆ ಸುಳ್ಳು ಸುದ್ದಿಗಳದ್ದೇ ಕಾರುಬಾರು!

ತರಕಾರಿ ಹರಾಜು ಮಾರುಕಟ್ಟೆಗೆ ಬಂದ ನ್ಯಾಯಾಧೀಶರು| ನ್ಯಾಯಾಧೀಶರು, ಅಧಿಕಾರಿಗಳು ಮಾರುಕಟ್ಟೆಯಲ್ಲಿ ಜಂಟಿ ಸಂಚಾರ| ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಪಾಲಿಸಲು ಖಡಕ್‌ ಸೂಚನೆ| ನಿಯಮ ಪಾಲಿಸದ ವ್ಯಾಪಾರಿಗಳಿಗೆ ಗ್ರಾಹಕರಿಗೆ ಎಚ್ಚರಿಕೆ|

Rumour About Coronavirus in Gadag district
Author
Bengaluru, First Published Apr 5, 2020, 10:35 AM IST

ಗದಗ(ಏ.05): ಜಿಲ್ಲೆಯಾದ್ಯಂತ ದೆಹಲಿಯ ಘಟನೆಯ ನಂತರ ಸಾಕಷ್ಟು ವದಂತಿಗಳು ಹರಡುತ್ತಿವೆ.

ಅದರಲ್ಲೂ ಗ್ರಾಮಗಳಲ್ಲಿ ಖಾಲಿ ಇರುವ ಯುವಕರಿಂದ ಜಿಲ್ಲೆಯಲ್ಲಿ ಇಷ್ಟು ಜನ ಕೊರೋನಾ ಬಂದಿದೆಯಂತೆ, ಇಷ್ಟು ಜನ ತೀವ್ರ ಸಂಕಷ್ಟದಲ್ಲಿದ್ದಾರಂತೆ, ಹಲವಾರು ಜನ ಬೇರೆ ಬೇರೆ ರಾಜ್ಯಗಳಿಂದ ತಪ್ಪಿಸಿಕೊಂಡು ಬಂದಿದ್ದಾರಂತೆ, ಗ್ರಾಮಗಳಲ್ಲಿ ರಾತ್ರಿ ಯಾರೂ ಹೊರಗಡೆ ಮಲಗಬೇಡಿ ಹೀಗೆ ನಾನಾ ರೀತಿಯ ವದಂತಿಗಳನ್ನು ಸೃಷ್ಟಿಸುತ್ತಿದ್ದು, ಮೊದಲೇ ಕೊರೋನಾ ಭೀತಿಯಿಂದ ನಲುಗಿ ಹೋಗಿರುವ ಜನತೆಗೆ ವದಂತಿಗಳು ಸಾಕಷ್ಟು ಅವಾಂತರ ಸೃಷ್ಟಿಸುತ್ತಿವೆ.
ಶನಿವಾರ ಗದಗ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಬೆಳ್ಳಂ ಬೆಳಗ್ಗೆ ಪರಿಶೀಲನೆಗಿಳಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎಸ್‌. ಸಂಗ್ರೇಶಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಾಕ್‌ ಡೌನ್‌ ನಿಯಮ ಪಾಲನೆ ಮಾಡದವರಿಗೆ ಎಚ್ಚರಿಕೆ ನೀಡಿ, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್‌ ಧರಿಸಬೇಕು. ಅಗತ್ಯಕ್ಕೆ ತಕ್ಕಂತೆ ಸ್ಯಾನಿಟೈಸರ್‌ ಬಳಕೆ ಮಾಡಲು ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಜೊತೆಯಲ್ಲಿದ್ದರು.

ಕ್ವಾರಂಟೈನ್‌ನಲ್ಲಿದ್ದ ವಿದೇಶದಿಂದ ಬಂದ 2 ಸಾವಿರಕ್ಕೂ ಹೆಚ್ಚು ಜನಕ್ಕೆ ಕೊರೋನಾ ನೆಗೆಟಿವ್

ಉಚಿತ ಹಾಲು ವಿತರಣೆ

ಲಾಕ್‌ಡೌನ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುತ್ತಿರುವ ಜಿಲ್ಲೆಯ ಬಡವರು, ನಿರ್ಗತಿಕರಿಗೆ ಶನಿವಾರ ಉಚಿತವಾಗಿ ಹಾಲು ವಿತರಣೆ ಮಾಡಲಾಯಿತು. ಸಿಎಂ ಬಿ.ಎಸ್‌. ಯಡಿಯೂರಪ್ಪನವರ ಆದೇಶದಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಶನಿವಾರ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡಿದರು. ಇಲ್ಲಿನ ಹುಬ್ಬಳ್ಳಿ ರಸ್ತೆಯ ಸ್ಲಂ ಪ್ರದೇಶಗಳಲ್ಲಿ, ಇಂಡಸ್ಟ್ರೀಯಲ್‌ ಪ್ರದೇಶಗಳಲ್ಲಿರುವ ಸ್ಲಂಗಳಲ್ಲಿನ ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ನಂದಿನಿ ಹಾಲು ನೀಡಲಾಯಿತು. ಜಿಲ್ಲೆಯಾದ್ಯಂತ ನೂರಾರು ಬಡ ಕುಟುಂಬಗಳಿಗೆ ನಿತ್ಯವೂ ಸುಮಾರು 5 ಸಾವಿರ ಲಿಟರ್‌ ಹಾಲು ವಿತರಿಸಲಾಗುತ್ತದೆ.

ಹೊರಬರಬೇಡಿ ಎಂದ ವಿದೇಶಿ ಕನ್ನಡಿಗ

ಇಡೀ ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್‌ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಲೇಷಿಯಾದಲ್ಲಿರುವ ಗದಗ ಮೂಲದ ಕನ್ನಡ ಯುವಕ ಕನ್ನಡಿಗರಿಗೆ ಮನೆಯಿಂದ ಆಚೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ತನ್ನ ಅಟ್ಟಹಾಸದಿಂದ ಮಾನವ ಕುಲವನ್ನೇ ನಲುಗಿಸುತ್ತಿರುವ ಕೊರೋನಾದಿಂದ ಪಾರಾಗಲು ಯಾರೂ ಮನೆಯಿಂದ ಹೊರಬರಬೇಡಿ ಎಂದು ಸೆಲ್ಫಿ ವಿಡಿಯೋ ಮಾಡಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ.

ಕಾರ್ಮಿಕರ ಪರದಾಟ

ಮಂಗಳೂರು, ಕಾಸರಗೋಡು ಭಾಗದಲ್ಲಿ ಕೂಲಿಗಾಗಿ ತೆರಳಿದ್ದ ಗದಗ ಸೇರಿದಂತೆ ಬಾಗಲಕೋಟೆ, ಹಾವೇರಿ ಜಿಲ್ಲೆಯ ಸುಮಾರು 19 ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲಿಂದ ನಡೆದುಕೊಂಡೆ ಬರುವಾಗ ಚೆಕ್‌ ಪೋಸ್ಟ್‌ನಲ್ಲಿ ತಮ್ಮ ನೋವು ಹೇಳಿಕೊಂಡ ಅವರು, ಜಿಲ್ಲಾಡಳಿತ ತಮಗೆ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದು, ಬೆಳಕಿಗೆ ಬಂದಿದ್ದು ಅವರನ್ನು ಜಿಲ್ಲಾಡಳಿತ ತಪಾಸಣೆ ನಡೆಸಿ ಆಹಾರ ವಿತರಿಸಿದೆ.
ಲಾಕ್‌ ಡೌನ್‌ ಮಾಡಿದ ಹಿನ್ನೆಲೆಯಲ್ಲಿ ಶಿರಹಟ್ಟಿತಾಲೂಕಿನ ಬೆಳ್ಳಟ್ಟಿಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಕೈಯಲ್ಲಿ ಲಾಠಿ ಹಿಡಿದು ತಮ್ಮ ಗ್ರಾಮದ ಜನರನ್ನು ತಾವೇ ಕಾಯುತ್ತಿದ್ದಾರೆ. ಪೊಲೀಸರ ಸಹಾಯವಿಲ್ಲದೇ ಮನೆಯಿಂದ ಹೊರಗಡೆ ಬಾರದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳ ಮುಂದೆ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಣ ಹಿಂದೆ ಪಡೆಯಲು ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
 

Follow Us:
Download App:
  • android
  • ios