ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೆಲ ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಏಕೆಂದರೆ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಜ್‌ತಕ್‌ ಸುದ್ದಿವಾಹಿನಿಯ ಬ್ರೇಕಿಂಗ್‌ ನ್ಯೂಸ್‌ ಸ್ಕ್ರೀನ್‌ಶಾಟ್‌ ಮತ್ತು ಅಮಿತ್‌ ಶಾ, ಮಿಲಿಟರಿ ವಸ್ತ್ರ ಮತ್ತು ಬಿಳಿ ವಸ್ತ್ರ ಧರಿಸಿರುವ ವ್ಯಕ್ತಿಗಳ ಜೊತೆ ನಿಂತಿರುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ. ಇನ್ನೊಂದೆಡೆ ಸಚ್‌ ನ್ಯೂಸ್‌ ಹೆಸರಿನ ಸುದ್ದಿವಾಹಿನಿಯ ಸ್ಕ್ರೀನ್‌ಶಾಟ್‌ ಕೂಡ ವೈರಲ್‌ ಆಗಿದ್ದು ಅದರಲ್ಲಿ, ಅಮಿತ್‌ ಶಾಗೆ ಕೊರೋನಾ ವೈರಸ್‌ ಸೋಂಕು ಇರುವುದು ದೃಢಪಟ್ಟಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

 

ಆದರೆ ಆಲ್ಟ್‌ನ್ಯೂಸ್‌ ಸುದ್ದಿಸಂಸ್ಥೆ ಈ ಸುದ್ದಿಯ ಸತ್ಯಾಸತ್ಯವನ್ನು ಶೋಧಿಸಿದೆ. ಮೊದಲನೆಯದಾಗಿ ಆಜ್‌ತಕ್‌ ಹೆಸರಿನ ವೈರಲ್‌ ಫೋಟೋದಲ್ಲಿ ಸುದ್ದಿಸಂಸ್ಥೆಯ ಲೋಗೋವೇ ಬ್ಲರ್‌ ಆಗಿದೆ. ಹಾಗೆಯೇ ಸಚ್‌ ನ್ಯೂಸ್‌ ಎಂಬ ಯಾವುದೇ ಸುದ್ದಿ ಸಂಸ್ಥೆ ಅಸ್ತಿತ್ವದಲ್ಲಿ ಇಲ್ಲ. ಎಬಿಪಿ ನ್ಯೂಸ್‌ ಚಾನಲ್‌ನ ಬ್ರೇಕಿಂಗ್‌ ನ್ಯೂಸ್‌ ಸ್ಕ್ರೀನ್‌ಶಾಟ್‌ ಬಳಸಿಕೊಂಡು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಸಚ್‌ನ್ಯೂಸ್‌ ಎಂಬ ಲೋಗೋ ರಚಿಸಿ, ಸಂಕಲಿಸಲಾಗಿದೆ.

Fact Check: 1 ವಾರ ದೇಶಾದ್ಯಂತ ಇಂಟರ್ನೆಟ್‌ ರದ್ದು?

ಇನ್ನು ಅಮಿತ್‌ ಶಾ, ಮಿಲಿಟರಿ ಹಾಗೂ ಬಿಳಿ ವಸ್ತ್ರ ಧರಿಸಿದವರ ಜೊತೆ ನಿಂತ ಫೋಟೋ 2014ರದ್ದು. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅನಾರೋಗ್ಯದಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರನ್ನು ಶಾ ಭೇಟಿ ಮಾಡಲು ಹೋದಾಗ ತೆಗೆದ ಫೋಟೋ ಅದು. ಅದನ್ನು ಬಳಸಿಕೊಂಡು ಅಮಿತ್‌ ಶಾ ಅವರಿಗೆ ಕೊರೋನಾ ತಗಲಿದೆ ಎಂಬ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್