ಬೆಂಗಳೂರು (ಮಾ.25): ಇನ್ನು 21 ದಿನ ಭಾರತದಾದ್ಯಂತ ಲಾಕ್‌ಡೌನ್ ಇರೋ ಕಾರಣ ಎಟಿಎಂನಲ್ಲಿ  ದುಡ್ಡು ಸಿಗದು, ಮಿನಿಮಮ್ ಬ್ಯಾಲೆನ್ಸ್‌ ಇಟ್ಟು, ಮಿಕ್ಕಿದ್ದೆಲ್ಲಾ ಡ್ರಾ ಮಾಡ್ಕೊಳ್ಳಿ ಎಂಬ ಸುದ್ದಿ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಆದರೆ ಇದು ಗಾಳಿ ಸುದ್ದಿ, ಜನರು ಅದನ್ನು ನಂಬಿ ಆತಂಕಕ್ಕೊಳಗಾಗಬೇಡಿ ಎಂದು ಬ್ಯಾಂಕ್ ಅಧಿಕಾರಿಗಳು ಸುವರ್ಣನ್ಯೂಸ್‌.ಕಾಂಗೆ ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್‌/ಎಟಿಎಂಗಳಲ್ಲಿ ಹಣ ಸಿಗುತ್ತೆ,  ಹಣ ಖಾಲಿಯಾಗುತ್ತೆ ಎಂಬ ಭಯ ಬೇಡ, ಸೋಶಿಯಲ್ ಮೀಡಿಯಾ ವದಂತಿಗಳಿಗೆ ಕಿವಿಕೊಡಬೇಡಿ. ಕನಿಷ್ಠ ಸಿಬ್ಬಂದಿ ಮೂಲಕ ಬ್ಯಾಂಕ್‌ಗಳು ಕೆಲಸ ಮಾಡುತ್ತವೆ,  ತುರ್ತು ಇದ್ರೆ ಮಾತ್ರ ಹೋಗಿ ಎಂದು ಆಲ್‌ ಇಂಡಿಯಾ ಬ್ಯಾಂಕ್ ಆಫಿಸರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್‌ ಸುವರ್ಣನ್ಯೂಸ್‌.ಕಾಂಗೆ ತಿಳಿಸಿದರು.

ಎಂದಿನಂತೆ ಎಟಿಎಂನಲ್ಲಿ ಹಣ ಸಿಗಲಿದೆ, ಬೆಂಗಳೂರಿನ‌ ಯಾವುದೇ ಎಟಿಎಂನಲ್ಲಿ ಜನ ದಟ್ಟಣೆ ಇಲ್ಲ. ಆರ್‌ಬಿಐ ನಿರ್ದೇಶನದಂತೆ ಬ್ಯಾಂಕ್‌ಗಳು ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿವೆ, ಪ್ರತಿ ದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುತ್ತವೆ ಎಂದು ಕರ್ನಾಟಕ ಬ್ಯಾಂಕ್ ಫೆಡರೇಷನ್ ಅಧ್ಯಕ್ಷ ವಸಂತ್ ರೈ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ ಬ್ಯಾಂಕ್‌ನಲ್ಲೂ ಹಣ ಜಮಾ ಮಾಡಬಹುದು ಹಾಗೂ ನಿಮ್ಮ ಹಣವನ್ನು ಬ್ಯಾಂಕ್ ಮೂಲಕ ವಿತ್ ಡ್ರಾ ಕೂಡಾ ಮಾಡಬಹುದು ಎಂದು ಅವರು ಹೇಳಿದರು.