ಬೆಂಗಳೂರು :  ಮೈತ್ರಿ ಪರಿಣಾಮವಾಗಿ ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಕ್ರುದ್ಧರಾಗಿರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಸುಸ್ತು ಹೊಡೆದಿದ್ದು, ಹೈಕಮಾಂಡ್‌ ಸಲುವಾಗಿ ಈ ಚುನಾವಣೆ ಮುಗಿಯುವವರೆಗೂ ಅನುಸರಿಸಿಕೊಂಡು ಹೋಗುವಂತೆ ಸಮಾಧಾನಪಡಿಸುವಷ್ಟರಲ್ಲಿ ಹೈರಾಣಾಗಿದ್ದಾರೆ.

ಕೆಪಿಸಿಸಿ ಸೂಚನೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಹಾಸನ ಹಾಗೂ ಮಂಡ್ಯದಿಂದ ಬುಧವಾರ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ನಾಯಕರು ಕ್ಷೇತ್ರ ಬಿಟ್ಟುಕೊಟ್ಟಬಗ್ಗೆ ಕಾಂಗ್ರೆಸ್‌ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅದರಲ್ಲೂ ಹಾಸನ ಕ್ಷೇತ್ರದ ಕಾರ್ಯಕರ್ತರು ನೇರವಾಗಿ ಸಿದ್ದರಾಮಯ್ಯ ನಿವಾಸದ ಬಳಿ ಆಗಮಿಸಿ ಧರಣಿಯನ್ನೇ ನಡೆಸಿದರು. ಅನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯಾವ ನಾಯಕರ ಸಮಾಧಾನದ ಮಾತುಗಳಿಗೂ ಜಗ್ಗದೇ, ಜೆಡಿಎಸ್‌ ನಾಯಕರು ಕ್ಷೇತ್ರದಲ್ಲಿ ನಡೆಸುತ್ತಿರುವ ಅನ್ಯಾಯ ಸರಿಪಡಿಸಿದ ನಂತರವೇ ಆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ಸೂಚಿಸಿ ಎಂದು ಆಗ್ರಹಿಸಿದರು.

ಕೊನೆಗೆ ಮೈತ್ರಿ ಧರ್ಮ ಪಾಲಿಸಬೇಕೆಂಬುದು ಹೈಕಮಾಂಡ್‌ ನಿರ್ಧಾರ. ಹಾಗಾಗಿ ಪ್ರತಿಯೊಬ್ಬರೂ ಪಾಲಿಸಬೇಕು. ನಿಮ್ಮ ಸಮಸ್ಯೆಗಳನ್ನು ಬೇಕಿದ್ದರೆ ಸಮನ್ವಯ ಸಮಿತಿ ರಚಿಸಿ ಬಗೆಹರಿಸೋಣ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆ ಪ್ರಕಾರ, ಜೆಡಿಎಸ್‌ ನಾಯಕರೊಂದಿಗೆ ಚರ್ಚಿಸಿ ಈ ಅಸಮಾಧಾನವನ್ನು ಸರಿಪಡಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಾಯಕರು ನಿರ್ಧರಿಸಿದ್ದಾರೆ

ಇದಕ್ಕೂ ಮುನ್ನ ಸಭೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವಂತೆ ಕೋರಿದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು ಜಿಲ್ಲೆಯಲ್ಲಿ ಜೆಡಿಎಸ್‌ನವರಿಂದ ತಮಗೆ ಆಗುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಮುಂದಿಟ್ಟರು.

ನೀವೇನೋ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳುತ್ತೀರಿ. ಆದರೆ, ಜಿಲ್ಲಾ ಮಟ್ಟದಲ್ಲಿ ನಮ್ಮ ಪರಿಸ್ಥಿತಿ ಭೀಕರವಾಗಿದೆ. ಸಚಿವ ರೇವಣ್ಣ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಾರೆ. ಎಲ್ಲಾ ಅಧಿಕಾರಿಗಳು ಅವರು ಹೇಳಿದಂತೆ ಕೇಳುತ್ತಾರೆ. ಕಾಂಗ್ರೆಸ್‌ನವರ ಯಾವುದೇ ಕೆಲಸ, ಮಾತುಗಳೂ ನಡೆಯುವುದಿಲ್ಲ. ಸಣ್ಣಪುಟ್ಟಜಗಳಕ್ಕೂ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸುತ್ತಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ತಾವೇ ರಾಜರಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆದಿದೆ. ವಿಪರೀತ ಸುಳ್ಳು ಕೇಸುಗಳನ್ನು ಹಾಕಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಜೈಲುಪಾಲು ಮಾಡಲಾಗುತ್ತಿದೆ. ಇನ್ನು ಕಳೆದ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಮಾಡಿದ ಗುತ್ತಿಗೆ ಕಾಮಗಾರಿಗೆ ಬಿಲ್‌ ಕೇಳಲು ಹೋದರೆ ಮೊದಲು ಪಕ್ಷ ಸೇರು, ಆಮೇಲೆ ಬಿಲ್‌ ಪಾಸ್‌ ಮಾಡುತ್ತೇವೆ ಎಂದು ರೇವಣ್ಣ ಅವರೇ ಹೇಳಿದ್ದಾರೆ. ನಮ್ಮ ಟ್ರಾಕ್ಟರ್‌ಗಳನ್ನು ಬೇರೆ ಗುತ್ತಿಗೆದಾರರಿಗೆ ಬಾಡಿಗೆಗೆ ನೀಡಲು ಬಿಡುತ್ತಿಲ್ಲ. ಈ ಪರಿ ಅನ್ಯಾಯ ಮಾಡುತ್ತಿದ್ದರೂ ಅವರ ಪರ ಪ್ರಚಾರ ಮಾಡಿ ಎನ್ನುತ್ತಿರಲ್ಲ. ಇದು ಸರಿಯೇ ಎಂದು ಕಾರ್ಯಕರ್ತರೊಬ್ಬರು ಸಭೆಯಲ್ಲಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

ನಾವೇನೋ ಕಾಂಪ್ರಮೈಸ್‌ ಮಾಡಿಕೊಳ್ಳೋಕೆ ಸಿದ್ಧರಿದ್ದೇವೆ. ಆದರೆ, ಅದಕ್ಕೂ ಜೆಡಿಎಸ್‌ನವರೇ ನಮ್ಮನ್ನು ಬಿಟ್ಟುಕೊಳ್ಳುವುದಿಲ್ಲ. ನಿಮ್ಮ ಮುಂದಷ್ಟೇ ನಾವೆಲ್ಲ ಸರಿಮಾಡ್ತೇವೆ, ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ಆದರೆ, ಹೇಳಿದಂತೆ ನಡೆದುಕೊಳ್ಳುವುದಿಲ್ಲ. ನಮ್ಮ ಮೇಲೆ ದಿನಾ ಸವಾರಿ ನಡೆಸುತ್ತಾರೆ. ಮಾಜಿ ಸಚಿವ ಎ.ಮಂಜು ಅವರು ಪಕ್ಷ ತೊರೆದಿದ್ದು ಇದೇ ಕಾರಣಕ್ಕೆ. ಹೀಗಿರುವಾಗ ನಾವು ಹೇಗೆ ಅವರ ಪರ ಕೆಲಸ ಮಾಡೋಣ ನೀವೇ ಹೇಳಿ ಎಂದು ಗೋಳು ತೋಡಿಕೊಂಡಿದ್ದಾರೆ.

ಮಂಡ್ಯ ಜಿಲ್ಲಾ ನಾಯಕರ ಸಭೆ:  ಇದೇ ವೇಳೆ ಮಂಡ್ಯ ಜಿಲ್ಲಾ ನಾಯಕರ ಸಭೆಯೂ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದು, ಮಂಡ್ಯದ ನಾಯಕರು ಜೆಡಿಎಸ್‌ ಜತೆ ಮೈತ್ರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಅನುಸರಿಸಿಕೊಂಡು ಹೋಗುವುದು ಅನಿವಾರ್ಯ. ಇದಕ್ಕೆ ಹೈಕಮಾಂಡ್‌ ನಿರ್ದೇಶನವಿದೆ. ಈ ಚುನಾವಣೆಯೊಂದರಲ್ಲಿ ಸಹಕರಿಸಿ ಎಂದು ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.