ದಿ ಕಾಶ್ಮೀರ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾಗಿ ಒಂದು ವಾರವಾಗಿದೆ.

ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರ ಅಸಮಾಧಾನ ಹೊರಹಾಕುತ್ತಿದ್ದಾರೆ. ಜೊತೆಗೆ ಒಂದಿಷ್ಟು ವಿವಾದ ಕೂಡ ಹುಟ್ಟಿಕೊಂಡಿದೆ. ಕೋಟಿ ಕೋಟಿ ಗಳಿಕೆ ಮಾಡುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. 1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ಬಗ್ಗೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಸಿನಿಮಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಈಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಗೃಹ ಸಚಿವಾಲಯವು ವೈ ಕೆಟಗರಿ ಭದ್ರತೆ(Y security) ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾಗಿ ವಾರದ ಬಳಿಕ ತಮ್ಮ ಕುಟುಂಬಕ್ಕೆ ಬೆದರಿಕೆ ಇದು ಎಂದು ನಿರ್ದೇಶಕ ಅಗ್ನಿಹೋತ್ರಿ ಹೇಳಿದ್ದರು. ಇನ್ನು ಸಿನಿಮಾ ಬಿಡುಗಡೆಗೂ ಮೊದಲು ನಿರ್ದೇಶಕ ಅಗ್ನಿಹೋತ್ರಿ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು, ಅಲ್ಲದೆ ಈ ಸಿನಿಮಾ ಬಿಡುಗಡೆ ಮಾಡದಂತೆ ಬೆದರಿಕೆ ಕರೆಗಳು ಬಂದಿತ್ತು ಮತ್ತು ಅಸಭ್ಯ ಕರೆಗಳು ಬರುತ್ತಿದ್ದವು ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದರು. ಇದೀಗ ಸಿನಿಮಾ ಬಿಡುಗಡೆಯಾಗಿ ಅನೇಕ ದಿನಗಳ ಬಳಿಕ ನಿರ್ದೇಶಕರಿಗೆ ಭದ್ರತೆ ನೀಡಲಾಗಿದೆ. ಅಂದಹಾಗೆ ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿತ್ತು. ಇದೀಗ ವೈ ಕೆಟಗರಿ ಭದ್ರತೆ ಪಡೆಯುತ್ತಿರುವ ಬಾಲಿವುಡ್ ನ ಎರಡನೆ ವ್ಯಕ್ತಿ ಅಗ್ನಿಹೋತ್ರಿ ಆಗಿದ್ದಾರೆ. 

The Kashmir Files: ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ

ಇನ್ನು ಈ ಸಿನಿಮಾಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅನೇಕ ರಾಜಕೀಯ ಕ್ಷೇತ್ರದ ಗಣ್ಯರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ವಿದೇಶಿ ಗಳಿಕೆಯನ್ನೂ ಸೇರಿ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿ ಕಮಾಯಿ ಆಗಿದೆ. ಸಿನಿಮಾ ಬಿಡುಗಡೆಯಾಗಿ ಒಂದು ವಾರ ಆಗಿದ್ದರೂ ಸಹ ಈಗಲೂ ಅನೇಕ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

The Kashmir Files ಚಿತ್ರ ಪ್ರದರ್ಶನ ಮಾಡಿ, ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ

ಇನ್ನು ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.